ತಂದೆ ಅಪಹರಿಸಿದಾಗ ಸಿಎಂ ಆಗಿದ್ದ ಎಸ್‌.ಎಂ.ಕೃಷ್ಣ ಮಾಡಿದ ಸಹಾಯ ಅಪಾರ: ನಟ ಶಿವರಾಜ್‌ ಕುಮಾರ್

Sampriya

ಮಂಗಳವಾರ, 10 ಡಿಸೆಂಬರ್ 2024 (14:30 IST)
Photo Courtesy X
ಬೆಂಗಳೂರು:  ನಮ್ಮ ತಂದೆಯವರನ್ನು ವೀರಪ್ಪನ್ ಅಪಹರಿಸಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಮಾಡಿದ್ದ ಸಹಾಯವನ್ನು ಎಂದೂ ಮರೆಯಲು ಸಾಧ್ಯ ಇಲ್ಲ ಎಂದು ಎಂದು ನಟ ಶಿವರಾಜ್ ಕುಮಾರ್‌ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.30 ರ ಸುಮಾರಿಗೆ ನಿಧನರಾದರು. ಸದಾಶಿವನಗರದ ಎಸ್.ಎಂ. ಕೃಷ್ಣ ಅವರ ಮನೆಯಂಗಳದಲ್ಲಿ ರಾಜಕಾರಣಿಗಳು, ಚಿತ್ರರಂಗದ ಕಲಾವಿದರು ಕೃಷ್ಣ ಅವರ ಅಂತಿಮ ದರ್ಶನ ಪಡೆದರು.

ಮಂಗಳವಾರ ಮುಂಜಾನೆಯಿಂದಲೂ ಕೃಷ್ಣ ಅವರ ನಿವಾಸಕ್ಕೆ ಜನರು ಬರತೊಡಗಿದ್ದರು. ಸದಾಶಿವನಗರ, ಮಲ್ಲೇಶ್ವರದ ಸುತ್ತಮುತ್ತಲ ನಿವಾಸಿಗಳು ಅಂತಿಮ ದರ್ಶನ ಪಡೆದರು. ನಟಿ ರಮ್ಯಾ ಅವರು ಬೆಳಿಗ್ಗೆಯೇ ದರ್ಶನ ಪಡೆದರು. ಪಕ್ಕದ ನಿವಾಸಿಗಳಾದ ಅಶ್ವಿನಿ ಪುನೀತ್ ರಾಜಕುಮಾರ್, ಯುವ ರಾಜಕುಮಾರ ಬಂದು ಅಂತಿಮ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ, ನಮ್ಮ ಕುಟುಂಬಕ್ಕೆ ಕೃಷ್ಣ ಅವರು ತುಂಬಾ ಹತ್ತಿರದವರಾಗಿದ್ದರು. ಅತ್ಯಾಧುನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ವೀರಪ್ಪನ್ ನಮ್ಮ ತಂದೆಯವರನ್ನು ಅಪಹರಿಸಿದ್ದಾಗ ಅವರು ಮಾಡಿದ್ದ ಸಹಾಯವನ್ನು ಮರೆಯಲು ಸಾಧ್ಯ ಇಲ್ಲ ಎಂದರು.

ಅವರಿಗೆ ವಯಸ್ಸು ಎಷ್ಟೇ ಆಗಿದ್ದರೂ ನಷ್ಟ ನಷ್ಟವೇ. ಅದನ್ನು ಭರಿಸಲು ಸಾಧ್ಯ ಇಲ್ಲ. 92 ವರ್ಷದ ಅವರ ಜೀವನ ಸಾರ್ಥಕವಾಗಿದೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾಥಿಸುತ್ತೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ