ಈ ನಾಲ್ವರೊಂದಿಗೆ ಸಿನಿಮಾ ಮಾಡುವ ಕನಸಿತ್ತಂತೆ ಪುನೀತ್ ರಾಜ್ ಕುಮಾರ್ ಗೆ
ಪುನೀತ್ ರಾಜ್ ಕುಮಾರ್ ಗೆ ಚಿತ್ರರಂಗದ ಈ ನಾಲ್ವರು ದಿಗ್ಗಜರ ಜೊತೆ ಕೆಲಸ ಮಾಡಬೇಕೆಂದು ಭಾರೀ ಆಸೆಯಿತ್ತು ಎಂಬ ವಿಚಾರವನ್ನು ರಾಘಣ್ಣ ಬಹಿರಂಗಪಡಿಸಿದ್ದಾರೆ.
ಅಪ್ಪು ನಂಗೆ ಈ ನಾಲ್ವರ ಜೊತೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ನನ್ನಲ್ಲಿ ಕೇಳಿಕೊಂಡಿದ್ದ. ಒಂದು ಅಪ್ಪಾಜಿ ಜೊತೆಗೆ ದೊಡ್ಡವನಾದ ಮೇಲೆ ಪಾತ್ರ ಮಾಡಬೇಕು ಎಂದಿದ್ದ. ಇನ್ನೊಂದು ಮಣಿರತ್ನಂ ನಿರ್ದೇಶನದಲ್ಲಿ ಫ್ರೀ ಆಗಿ ಕೆಲಸ ಮಾಡಿ ಎಂದರೂ ಮಾಡಬೇಕೆಂಬ ಆಸೆಯಿದೆ ರಾಘಣ್ಣ ಎಂದಿದ್ದ ಅಪ್ಪು. ಇನ್ನು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಡಿಗೆ ಹೆಜ್ಜೆ ಹಾಕಬೇಕು ಎಂದಿದ್ದ. ಅಪ್ಪು ಜೊತೆಯಾಗಿ ಅಭಿನಯಿಸಲು ಆಸೆಪಟ್ಟಿದ್ದ ನಾಲ್ಕನೇ ವ್ಯಕ್ತಿ ಪ್ರಭುದೇವ. ಪ್ರಭುದೇವ ನಿರ್ದೇಶನದಲ್ಲಿ ಒಂದು ಹಾಡಿಗೆ ಸ್ಟೆಪ್ಸ್ ಹಾಕಬೇಕು ಎಂದಿದ್ದ. ಇದನ್ನು ನಾನು ಪ್ರಭುದೇವ ಜೊತೆ ಹೇಳಿಯೂ ಇದ್ದೆ. ಅವರನ್ನು ಕೋಟ್ಯಾಧಿಪತಿ ಶೋಗೆ ಕರೆದುಕೊಂಡು ಬಂದಿದ್ದೆ. ಹಾಗಾದರೂ ನನ್ನ ಆಸೆ ಈಡೇರುತ್ತಿದೆ ಬನ್ನಿ ನೋಡಿ ರಾಘಣ್ಣ ಎಂದು ನನ್ನ ಕರೆದಿದ್ದ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಬೇಕೆಂದರೆ ಒಂದು ಒಳ್ಳೆ ಹಾಡು ಬೇಕು ಎಂದು ಅಪ್ಪುಗೆ ಅಂದು ಪ್ರಭುದೇವ ಹೇಳಿದ್ದರು. ಇಂದು ಆ ಗಳಿಗೆ ಕೂಡಿಬಂದಿದೆ ನೋಡಿ ಎಂದು ರಾಘವೇಂದ್ರ ರಾಜ್ ಕುಮಾರ್ ಲಕ್ಕಿ ಮ್ಯಾನ್ ಸಿನಿಮಾದ ಪ್ರಭುದೇವ-ಪುನೀತ್ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.