ಹೈದರಾಬಾದ್: ಪುಷ್ಪ 2 ಚಿತ್ರದ ಪ್ರದರ್ಶನದ ವೇಳೆ ಡಿಸೆಂಬರ್ 4 ರ ರಾತ್ರಿ ಕಾಲ್ತುಳಿತ ಸಂಭವಿಸಿ 35 ವರ್ಷದ ಮಹಿಳೆ ಸಾವನ್ನಪ್ಪಿ, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಮಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಇದರಿಂದ ಅಲ್ಲು ಅರ್ಜುನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಈ ಕುರಿತು ಹೈದಾರಾಬಾದ್ ಸಿಟಿ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೇಜ್ ಆರೋಗ್ಯ ವಿಚಾರಿಸಿದ ಕಮಿಷನರ್ ಅವರು, ಕಾಲ್ತುಳಿತದ ಸಂದರ್ಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕ ಶ್ರೀತೇಜ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಇದೀಗ ಬಾಲಕನ ಮೆದುಳು ನಿಷ್ಕ್ರಿಯಗೊಂಡಿದೆ. ಸದ್ಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದರು. ತೇಜ್ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದರು.
ಡಿಸೆಂಬರ್ 4 ರ ರಾತ್ರಿ, ಮೊಗುಡಂಪಲ್ಲಿ ರೇವತಿ ಮತ್ತು ಅವರ ಮಗ ಶ್ರೀ ತೇಜ್ ಅವರು ಚಲನಚಿತ್ರವನ್ನು ವೀಕ್ಷಿಸಲು ಸಂಧ್ಯಾ ಥಿಯೇಟರ್‌ಗೆ ತಮ್ಮ ಕುಟುಂಬದೊಂದಿಗೆ ಬಂದಿದ್ದರು. ಥಿಯೇಟರ್ ಬಳಿ ಅಲ್ಲು ಅರ್ಜುನ್ ಬಂದಿದ್ದರಿಂದ ಕಾಲ್ತುಳಿತವಾಗಿ, ರೇವತಿ ಸಾವನ್ನಪಿದರು.
ತಾಯಿ ಹಾಗೂ ಮಗನನ್ನು ತಕ್ಷಣ ಪೊಲೀಸರು ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ರೇವತಿ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದು, ಆಕೆಯ ಮಗ ಶ್ರೀ ತೇಜ್‌ನನ್ನು ಉತ್ತಮ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ತಕ್ಷಣ ಬಾಲಕನನ್ನು ಕೆಐಎಂ ಆಸ್ಪತ್ರೆಗೆ ರವಾನಿಸಲಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಿ ವಿ ಆನಂದ್ ಮತ್ತು ತೆಲಂಗಾಣ ಸರ್ಕಾರದ ಆರೋಗ್ಯ ಕಾರ್ಯದರ್ಶಿ ಡಾ ಕ್ರಿಸ್ಟಿನಾ ಅವರು ತೆಲಂಗಾಣ ಸರ್ಕಾರದ ಪರವಾಗಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಶ್ರೀ ತೇಜ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.