ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಸಿಗೆ, ದಿಂಬು ಇತ್ಯಾದಿ ಸೌಲಭ್ಯ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ಇಂದು ಕೋರ್ಟ್ ಮಹತ್ವದ ಆದೇಶ ನೀಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನನಗೆ ಕನಿಷ್ಠ ಮೂಲಸೌಕರ್ಯವನ್ನೂ ಒದಗಿಸುತ್ತಿಲ್ಲ ಎಂದು ದರ್ಶನ್ ವಕೀಲರ ಮೂಲಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅದರಂತೆ ಕಾನೂನು ಪ್ರಾಧಿಕಾರದ ಸಮಿತಿ ಸದಸ್ಯರೇ ಜೈಲ್ ಗೆ ಬಂದು ಪರಶೀಲನೆಯನ್ನೂ ಮಾಡಿ ಹೋಗಿದ್ದರು. ಆದರೆ ಆಗ ದರ್ಶನ್ ಹೇಳುವಂತಹ ಯಾವ ಸಮಸ್ಯೆಯೂ ಅಧಿಕಾರಿಗಳಿಗೆ ಕಂಡುಬಂದಿರಲಿಲ್ಲ. ಒಬ್ಬ ವಿಚಾರಾಣಾಧೀನ ಕೈದಿಗೆ ನೀಡಬೇಕಾದ ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗಿದೆ ಎಂದು ಕಂಡುಬಂದಿತ್ತು.
ಇಂದು ಹಾಸಿಗೆ, ದಿಂಬು ಸೌಲಭ್ಯದ ಕುರಿತಂತೆ ದರ್ಶನ್ ಸಲ್ಲಿಸಿರುವ ಅರ್ಜಿ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದೆ. ತಿಂಗಳಿಗೊಮ್ಮೆ ಹಾಸಿಗೆ, ಬಟ್ಟೆಗಳನ್ನು ನೀಡುವಂತೆ ಕೋರ್ಟ್ ಆದೇಶಿಸಿದೆ. ಈ ತೀರ್ಪು ರೇಣುಕಾಸ್ವಾಮಿ ಪ್ರಕರಣದ ಇತರೆ ಆರೋಪಿಗಳಿಗೂ ಅನ್ವಯವಾಗಲಿದೆ.
ಇನ್ನು, ದರ್ಶನ್ ತಮ್ಮನ್ನು ಬೇರೆ ಬ್ಯಾರಕ್ ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದರು. ಆದರೆ ಇದು ಜೈಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ನ್ಯಾಯಾಲಯ ಹೇಳಿದೆ. ಈಗ ಇರುವ ಬ್ಯಾರಕ್ ನಲ್ಲಿ ಬಿಸಿಲು, ಗಾಳಿ ಬರುತ್ತಿಲ್ಲ ಎಂದು ದರ್ಶನ್ ಆರೋಪಿಸಿದ್ದರು.