ವಂಚಕ ಯುವರಾಜ್ ಜೊತೆಗೆ ರಾಧಿಕಾ ಕುಮಾರಸ್ವಾಮಿ ಹಣಕಾಸಿನ ವ್ಯವಹಾರ
ಬುಧವಾರ, 6 ಜನವರಿ 2021 (17:25 IST)
ಬೆಂಗಳೂರು: ಪ್ರಭಾವಿಗಳೊಂದಿಗೆ ಗುರುತಿಸಿಕೊಂಡು ಗಣ್ಯರಿಗೆ ವಂಚಿಸುತ್ತಿದ್ದ ಯುವರಾಜ್ ಎಂಬಾತ ಕೆಲವು ದಿನಗಳ ಹಿಂದೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಈತ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗಿನ ಹಣಕಾಸಿನ ವ್ಯವಹಾರ ಈಗ ಬಯಲಾಗಿದೆ. ಈ ಸಂಬಂಧ ನಟಿ ರಾಧಿಕಾ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ಯುವರಾಜ್ ನಿಂದ ರಾಧಿಕಾ ಖಾತೆಗೆ ಒಂದೂವರೆ ಕೋಟಿ ರೂ. ವರ್ಗಾವಣೆಯಾಗಿದೆ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಧಿಕಾ ಯುವರಾಜ್ ನನ್ನ ಖಾತೆಗೆ ಹಣ ವರ್ಗಾಯಿಸಿರುವುದು ನಿಜ. ಆದರೆ ಒಂದೂವರೆ ಕೋಟಿಯಲ್ಲ, 15 ಲಕ್ಷ ರೂ. ಅದೂ ಸಿನಿಮಾವೊಂದರ ನಿಮಿತ್ತ. ಯುವರಾಜ್ ಪತ್ನಿ ನಿರ್ಮಾಪಕಿ. ಸಿನಿಮಾ ಮಾಡುವ ಸಂಬಂಧ ನನಗೆ ಹಣ ನೀಡಿದ್ದರು. ಇನ್ನೊಬ್ಬ ವ್ಯಕ್ತಿಯ ಖಾತೆಯಿಂದ 60 ಲಕ್ಷ ರೂ. ವರ್ಗಾಯಿಸಿದ್ದರು. ನನಗೆ ಅವರು ಮೊದಲಿನಿಂದಲೂ ಪರಿಚಯವಿತ್ತು. ಹಾಗಾಗಿ ಸಿನಿಮಾ ವಿಚಾರವಾಗಿ ಎಂದು ಸುಮ್ಮನಿದ್ದೆ. ಇದೀಗ ಅವರ ಹಣವನ್ನೆಲ್ಲಾ ಅವರಿಗೇ ವಾಪಸ್ ಮಾಡ್ತೀನಿ. ನನ್ನ ತಂದೆಯ ಕಾಲದಿಂದಲೂ ಅವರ ಪರಿಚಯವಿತ್ತು. ಹೀಗಾಗಿ ಅವರನ್ನು ತುಂಬಾ ನಂಬಿದ್ದೆ. ಈಗ ನನಗೆ ಮೋಸವಾಗಿದೆ ಎಂದು ರಾಧಿಕಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.