Ravi Basruru birthday: ಕಿಡ್ನಿ ಮಾರಲು ಮುಂದಾಗಿದ್ದ ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು

Krishnaveni K

ಬುಧವಾರ, 1 ಜನವರಿ 2025 (08:46 IST)
Photo Credit: Instagram
ಬೆಂಗಳೂರು: ಕೆಜಿಎಫ್ ಸಿನಿಮಾದ ಹಾಡಿನ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಹಿಂದೊಮ್ಮೆ ತಮ್ಮ ಕಿಡ್ನಿ ಮಾರಲೂ ಮುಂದಾಗಿದ್ದರಂತೆ. ಅವರ ಜನ್ಮದಿನವಾದ ಇಂದು ಅವರ ಜೀವನದ ಫ್ಲ್ಯಾಶ್ ಬ್ಯಾಕ್ ಗೆ ಹೋಗೋಣ.

ಕೆಜಿಎಫ್ ಗಿಂತ ಮೊದಲೂ ರವಿ ಬಸ್ರೂರು ಹಾಡಿನ ಪಯಣ ಶುರುವಾಗಿದ್ದರೂ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಈ ಸಿನಿಮಾ. ಇದರ ಮೂಲಕ ರವಿ ಬಸ್ರೂರು ಎಂಬ ಹೆಸರು ಪರಭಾಷೆಗಳಿಗೂ ತಲುಪಿತ್ತು. ಅವರ ಜೀವನ ಕತೆಯೇ ಸ್ಪೂರ್ತಿ. ಸಂಗೀತ ನಿರ್ದೇಶಕನಾಗುವ ಮೊದಲು ಅವರು ಮಾಡದ ಕೆಲಸವಿಲ್ಲ.

ಆರಂಭದ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕು ಪರದಾಡುವ ಸ್ಥಿತಿ ಅವರದ್ದಾಗಿತ್ತು. 10 ರೂ. ಕೊಟ್ಟು ಊಟ ಕೊಳ್ಳಲೂ ಸಾಧ್ಯವಾಗದ ಬಡತನವಿತ್ತು. ಆದರೆ ಇಂದು ತಮ್ಮ ಹಾಡಿನ ಮೂಲಕ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗದೇ ಪಬ್ಲಿಕ್ ಟಾಯ್ಲೆಟ್ ನಲ್ಲಿ ರವಿ ಬಸ್ರೂರು ದಿನ ಕಳೆದಿದ್ದರಂತೆ.

ರವಿ ಬಸ್ರೂರು ಮೂಲ ಹೆಸರು ಕಿರಣ್. ಅವರಿಗೆ ಹೆಚ್ಚು ವಿದ್ಯೆಗೆ ತಲೆಗೆ ಹತ್ತಲಿಲ್ಲ. ಹೀಗಾಗಿ ಒಪ್ಪೊತ್ತಿನ ಊಟಕ್ಕಾಗಿ ಸಿಕ್ಕ ಸಿಕ್ಕ ಕೆಲಸವನ್ನೆಲ್ಲಾ ಮಾಡಿದ್ದರಂತೆ. ಕಮ್ಮಾರನ ಕೆಲಸದಿಂದ ಹಿಡಿದು ಗಾರೆ ಕೆಲಸ, ಪೈಂಟರ್ ಹೀಗೆ ಸಿಕ್ಕ ಕೆಲಸವನ್ನೆಲ್ಲಾ ಮಾಡಿ ಹೊಟ್ಟೆ ಪಾಡು ನೋಡಿಕೊಳ್ಳುತ್ತಿದ್ದರು. ಕೊನೆಗೆ ಹೊಟ್ಟೆ ಪಾಡಿಗಾಗಿ ಮುಂಬೈನ ಪಬ್ ಒಂದರಲ್ಲಿ ಕೀಬೋರ್ಡ್ ನುಡಿಸುವುದು, ಹಾಡುವುದು ಇತ್ಯಾದಿ ಕೆಲಸವನ್ನು ಮಾಡುತ್ತಿದ್ದರು. ಆದರೆ ಅನಿವಾರ್ಯ ಕಾರಣದಿಂದ ಆ ಕೆಲಸವೂ ಹೋಗಿ ಅಳುತ್ತಲೇ ಮತ್ತೆ ಬಂದು ತವರು ಸೇರಿಕೊಂಡಿದ್ದರು. ಅತ್ತ ಕೆಲಸವೂ ಇಲ್ಲ, ದುಡ್ಡು ಬೇಕಾಗಿತ್ತು ಎಂದಾಗ ತಮ್ಮ ಕಿಡ್ನಿಯನ್ನೇ ಮಾರಲು ಮುಂದಾಗಿದ್ದರಂತೆ. ಆದರೆ ಬಳಿಕ ಹಾಗೆ ಮಾಡಲು ಭಯವಾಗಿ ಕೈಗೆ ಸಿಕ್ಕ ಕೆಲಸವನ್ನು ಮಾಡುತ್ತಾ ದಿನ ಕಳೆದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇಂತಿಪ್ಪ ರವಿ ಬಸ್ರೂರು ಈಗ ಸಂಗೀತ ನಿರ್ದೇಶನದ ಜೊತೆಗೆ ತಮ್ಮ ಊರಿನಲ್ಲೇ ಸ್ವಂತ ಸ್ಟುಡಿಯೋ ಹಾಕಿಕೊಂಡು ಎಷ್ಟೋ ಜನರಿಗೆ ಕೆಲಸ ಕೊಡುತ್ತಿದ್ದಾರೆ. ಜೊತೆಗೆ ತಮ್ಮದೇ ನಿರ್ಮಾಣದ ಸಿನಿಮಾವೊಂದನ್ನು ತರುವ ಪ್ಲ್ಯಾನ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ