ಬೆಂಗಳೂರು: ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಷ್ ಅವರ ಜನ್ಮದಿನ ಇಂದು. ಸಿನಿಮಾ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಕಾಣಿಸಿಕೊಂಡಿದ್ದ ಅವರು ಇಹಲೋಹ ತ್ಯಜಿಸಿದರೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಂಬಿ ಜನ್ಮದಿನದ ಅಂಗವಾಗಿ ಸುಮಲತಾ ಅಂಬರೀಶ್ ಅವರು ಸಾಮಾಜಿಕ ಜಾಲತಣದಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.
ನೀವು ಸದಾ ನೆನಪಾಗುತ್ತೀರಿ. ನಿಮ್ಮನ್ನು ನೆನಸಿಕೊಂಡಾಗಲೆಲ್ಲ ಮುಖದಲ್ಲಿ ನಗು ಮೂಡುತ್ತದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ನೀವು ಎಲ್ಲಿ ವಿಶ್ರಾಂತಿ ಪಡೆಯುತ್ತೀರೋ ಅಲ್ಲಿ ನಿಮ್ಮ ಸ್ಮರಣೆಯು ನನಗೆ ಅಮೂಲ್ಯ ಮತ್ತು ಉತ್ತಮ ಎಂದು ನಾನು ಭಾವಿಸುತ್ತೇನೆ. ನೀವು ನಮ್ಮ ಜೀವನದ ಒಂದು ಭಾಗ. ಪ್ರತಿಕ್ಷಣ ಮತ್ತು ಎಂದೆಂದಿಗೂ. ನೀವು ಬದುಕನ್ನು ಮೀರಿದವರು.. ನೀವೇ ಜೀವನ. ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು ಎಂದು ಸುಮಲತಾ ಅವರು ಪತಿಯನ್ನು ನೆನೆದುಕೊಂಡು ಬರೆದುಕೊಂಡಿದ್ದಾರೆ.
ಅಜಾತಶತ್ರುವಾಗಿದ್ದ ಅಂಬಿ ನವೆಂಬರ್ 24, 2018ರಂದು ಹೃದಯಾಘಾತದಿಂದ ನಿಧನರಾದರು. ಅಂಬರೀಶ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೆ ಬಾಲಿವುಡ್, ಟಾಲಿವುಡ್, ಕಾಲಿವುಡ್‌ನಲ್ಲಿಯೂ ಅಪಾರ ಸ್ನೇಹ ಬಳಗ ಹೊಂದಿದ್ದರು. ಕೇಂದ್ರ ಹಾಗೂ ರಾಜ್ಯದ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಚಿತ್ರರಂಗಕ್ಕೆ ದೊಡ್ಡಣ್ಣನಂತೆ ಇದ್ದರು. ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಅಲ್ಲಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ.
ಅಂಬಿ ಸಮಾಧಿಯ ಬಳಿ ಕುಟುಂಬದ ಸದಸ್ಯರಿಂದ ಮತ್ತು ಅಭಿಮಾನಿಗಳಿಂದ ಪೂಜೆ ನಡೆಯಿತು. ಪೂಜೆಯ ಬಳಿಕ ಮಂಡ್ಯದತ್ತ ಸುಮಲತಾ ತೆರಳಲಿದ್ದಾರೆ. ಮಂಡ್ಯದೆಲ್ಲೆಡೆ ಅಂಬರೀಶ್ ಹುಟ್ಟುಹಬ್ಬದ ಆಚರಣೆ ಸಂಭ್ರಮರಿಂದ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆಗೆ ಮಂಡ್ಯದಲ್ಲಿ ಅಂಬಿ ಜನ್ಮ ಜಯಂತಿ ಆಚರಣೆ ಆಗುತ್ತಿದೆ. ಹಲವು ಸಾಮಾಜಿಕ ಕೆಲಸ ನಡೆಯುತ್ತಿದೆ.