ರಾಜಕುಮಾರನಿಗೆ ತಮಿಳು ಸ್ಟಾರ್ ಶರತ್ ಕುಮಾರ್ ಡಬ್ಬಿಂಗ್

ಗುರುವಾರ, 5 ಜನವರಿ 2017 (11:19 IST)
ತಮಿಳು ಸ್ಟಾರ್ ನಟ ಶರತ್ ಕುಮಾರ್ ಅವರು ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಿರುವ ಚಿತ್ರ ರಾಜಕುಮಾರ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದಾರೆ. 
 
ಚಿತ್ರಕ್ಕೆ ಡಬ್ಬಿಂಗ್ ಹೇಳಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಶರತ್ ಕುಮಾರ್. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾರಥಿ ಚಿತ್ರದಲ್ಲಿ ಅವರ ತಂದೆ ಪಾತ್ರ ಪೋಷಿಸಿದ್ದರು ಶರತ್ ಕುಮಾರ್. ಇದೀಗ ಪುನೀತ್ ಅವರಿಗೆ ತಂದೆಯಾಗಿ ಪರದೆ ಮೇಲೆ ಕಾಣಿಸಲಿದ್ದಾರೆ.
 
ಈಗಾಗಲೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಹಲವಾರು ಕಲಾವಿದರು ತೆರೆಹಂಚಿಕೊಂಡಿದ್ದಾರೆ.
 
ಶರತ್ ಕುಮಾರ್, ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ಅನಂತ್ ನಾಗ್, ಬಾರ್ಘವಿ ನಾರಾಯಣ್, ಅಶೋಕ್, ಅರುಣಾ ಬಾಲರಾಜ್, ವಿಜಯಲಕ್ಷ್ಮಿ ಸಿಂಗ್, ದಿವಂಗತ ಅನಿಲ್, ಹೊನ್ನವಳ್ಳಿ ಕೃಷ್ಣ, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲಾ, ಚಿಕ್ಕಣ್ಣ ಹೀಗೆ ಬಹುದೊಡ್ಡ ತಾರಾಬಳಗ ಚಿತ್ರದಲ್ಲಿದೆ.
 
ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದು, ವೆಂಕಟೇಶ್ ಅನುರಾಗ್ ಛಾಯಾಗ್ರಹಣ ಇದೆ. ಶೀಘ್ರದಲ್ಲೇ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರು ಸೇರಿದಂತೆ ಆಸ್ಟ್ರೇಲಿಯಾ, ಮೈಸೂರು, ಹೈದರಾಬಾದ್, ಗೋವಾ ಮತ್ತು ದೆಹಲಿಯಲ್ಲಿ ಶೂಟಿಂಗ್ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ