ಬೆಂಗಳೂರು: ಸುಮಧುರ ಕಂಠದ ಗಾಯಕಿ ಶ್ರೇಯಾ ಘೋಷಾಲ್ ಗೆ ಇಂದು ಜನ್ಮದಿನದ ಸಂಭ್ರಮ. ಶ್ರೇಯಾ ಇಂದಿಗೆ 40 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಸೇರಿದಂತೆ ಬಹುಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ಶ್ರೇಯಾ ಘೋಷಾಲ್ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಕಂಠದ ಜೊತೆಗೆ ರೂಪದಲ್ಲೂ ಯಾವ ಸಿನಿಮಾ ಹೀರೋಯಿನ್ ಗೂ ಕಮ್ಮಿಯಿಲ್ಲದಂತಹ ಸೌಂದರ್ಯವತಿ.
ಅನೇಕ ಕನ್ನಡ ಹಾಡುಗಳನ್ನು ಹಾಡಿರುವ ಶ್ರೇಯಾ ಘೋಷಾಲ್ ಕನ್ನಡಿಗರಿಗೆ ಅತ್ಯಂತ ಪ್ರಿಯವಾದ ಗಾಯಕಿಯಾಗಿದ್ದಾರೆ. ಶ್ರೇಯಾ ಕೂಡಾ ಕನ್ನಡಿಗರೆಂದರೆ ಅಷ್ಟೇ ಗೌರವಿಸುತ್ತಾರೆ. ಇಂತಿಪ್ಪ ಶ್ರೇಯಾ ಹಾಡಿದ ಮೊದಲ ಕನ್ನಡ ಹಾಡು ಯಾವುದು ಎಂದು ನಿಮಗೆ ಗೊತ್ತಾ?
ಕನ್ನಡದಲ್ಲಿ ಶ್ರೇಯಾ ಹಾಡಿದ ಮೊದಲ ಹಾಡು ಪ್ಯಾರಿಸ್ ಪ್ರಣಯ ಸಿನಿಮಾಗಾಗಿ ಕೃಷ್ಣ ನೀ ಬೇಗನೇ ಬಾರೋ ಎಂಬ ಹಾಡು. ಇದಾದ ಬಳಿಕ ಮುಂಗಾರು ಮಳೆ, ಗಗನವೇ ಬಾಗಿ, ಸಾಲುತಿಲ್ಲವೇ, ಒಂದು ಮಳೆ ಬಿಲ್ಲು, ನೀ ಕೋಟಿಯಲಿ ಒಬ್ಬನೇ, ಕಣ್ಣು ಹೊಡೆಯಾಕ ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ. ಕನ್ನಡದಲ್ಲಿ ಅವರು ಹಾಡಿದ ಹಾಡಿಗೆ ಫಿಲಂ ಫೇರ್ ಪ್ರಶಸ್ತಿ, ಸೈಮಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅನೇಕ ಕನ್ನಡ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಲ್ಲದೆ, ಕನ್ನಡ ನಾಡಿನ ಅನೇಕ ಕಡೆ ಲೈವ್ ಕಾರ್ಯಕ್ರಮಗಳನ್ನು ನೀಡಿ ಇಲ್ಲಿಯ ಸ್ವಂತ ಮನೆ ಮಗಳಂತೇ ಆಗಿದ್ದಾರೆ. ಅವರಿಗೆ ನಮ್ಮ ಕಡೆಯಿಂದ ಒಂದು ಹ್ಯಾಪೀ ಬರ್ತ್ ಡೇ.