ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡು ನಿರ್ದೇಶಿಸಿ ನಟಿಸಿದ ಸು ಫ್ರಮ್ ಸೋ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ. ಸತತ ಸೋಲಿನಿಂದ ಬರಗೆಟ್ಟಿದ್ದ ಚಿತ್ರರಂಗಕ್ಕೆ ಈ ಸಿನಿಮಾ ಸಂಜೀವಿನಿಯಾಗಿದೆ.
ಸ್ಟಾರ್ ನಟರಿಲ್ಲದಿದ್ದರೂ ಕತೆಯಿಂದಾಗಿ ಗೆದ್ದ ಸಿನಿಮಾವಿದು. ಹಾಸ್ಯವೇ ಈ ಸಿನಿಮಾದ ಜೀವಾಳ. ಈ ಸಿನಿಮಾಗೆ ಅಬ್ಬರದ ಪ್ರಚಾರವನ್ನೂ ಮಾಡಿರಲಿಲ್ಲ. ಬಿಗ್ ಬಜೆಟ್ ಸಿನಿಮಾವೂ ಅಲ್ಲ. ಹಾಗಿದ್ದರೂ ಸಿನಿಮಾ ಬಾಯಿ ಮಾತಿನ ಪ್ರಚಾರದಿಂದಲೇ ಗೆದ್ದಿದೆ.
ಎಷ್ಟು ಎಂದರೆ ಚಿತ್ರ ವೀಕ್ಷಿಸಲು ಟಿಕೆಟ್ ಸಿಗುವುದೇ ಕಷ್ಟವಾಗಿದೆ. ವೀಕೆಂಡ್ ಮಾತ್ರವಲ್ಲ, ವೀಕ್ ಡೇ ನಲ್ಲೂ ಟಿಕೆಟ್ ಸೋಲ್ಡ್ ಔಟ್ ಆಗುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಕಾಂತಾರ ಬಳಿಕ ಈ ಮಟ್ಟಿಗೆ ಟಿಕೆಟ್ ಗಾಗಿ ನೂಕು ನುಗ್ಗಲಾಗಿದ್ದು ಇದೇ ಮೊದಲು.
ಕಾಂತಾರ ಸಿನಿಮಾಗೂ ಬಿಡುಗಡೆಗೆ ಮುನ್ನ ಅಬ್ಬರದ ಪ್ರಚಾರವಿರಲಿಲ್ಲ. ಬಾಯಿ ಮಾತಿನ ಪ್ರಚಾರದಿಂದಲೇ ಸಿನಿಮಾ ಭರ್ಜರಿ ಹಿಟ್ ಆಯ್ತು. ಎಷ್ಟರಮಟ್ಟಿಗೆ ಎಂದರೆ 100 ಕೋಟಿ ಗಳಿಕೆ ಮಾಡುವಷ್ಟು. ಈಗ ಸು ಫ್ರಮ ಸೋ ಸಿನಿಮಾವೂ ಬಾಯಿ ಮಾತಿನ ಪ್ರಚಾರದಿಂದಲೇ ಭರ್ಜರಿ ಗೆಲುವು ಕಂಡಿದೆ. ಈ ಸಿನಿಮಾ ಕಾಂತಾರದಷ್ಟು ದೊಡ್ಡ ಗಳಿಕೆ ಮಾಡದೇ ಇರಬಹುದು. ಆದರೆ ಚಿತ್ರದ ಬಜೆಟ್ ಗಮನಿಸಿದರೆ ಇದರ ಗೆಲುವು ಕಾಂತಾರದಷ್ಟೇ ದೊಡ್ಡದು ಎನ್ನಬಹುದು. ಕೇವಲ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಈಗ ಗಳಿಕೆಯಲ್ಲಿ 10 ಕೋಟಿ ರೂ. ದಾಟಿದೆ. ಇದು ಕೇವಲ ನಾಲ್ಕು ದಿನಗಳಲ್ಲಿ. ಈಗಲೂ ಚಿತ್ರಕ್ಕೆ ಬೇಡಿಕೆ ತಗ್ಗಿಲ್ಲ. ಹೀಗಾಗಿ ಗಳಿಕೆ ಮತ್ತಷ್ಟುಹೆಚ್ಚಾಗುವ ನಿರೀಕ್ಷೆಯಿದೆ.