ಸುರೇಶ್ ಹೆಬ್ಳೀಕರ್ ನಿರ್ದೇಶನದ ಚಿತ್ರ ಮನ ಮಂಥನ

ಸೋಮವಾರ, 13 ಫೆಬ್ರವರಿ 2017 (13:15 IST)
ಎಪ್ಪತ್ತು, ಎಂಭತ್ತರ ದಶಕದ ಕನ್ನಡ ಚಿತ್ರರಂಗದಲ್ಲಿ ‘ಆಲೆಮನೆ’, ‘ಕಾಡಿನ ಬೆಂಕಿ’, ‘ಪ್ರಥಮ ಉಷಾಕಿರಣ’, ‘ಆಗುಂತಕ’ ಮುಂತಾದ ಹೆಸರಾಂತ ಚಿತ್ರಗಳನ್ನು ನೀಡಿದವರು ನಟ, ನಿರ್ಮಾಪಕ ನಿರ್ದೇಶಕ ಸುರೇಶ್ ಹೆಬ್ಳಿಕರ್. ಅನಂತರ ಇವರು ಚಿತ್ರರಂಗದಿಂದ ದೂರು ಉಳಿದು ಪರಿಸರ ಪ್ರೇಮಿಯಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ. 
 
ಈಗ ಚಿತ್ರರಂಗಕ್ಕೆ ವಾಪಸ್ಸಾಗಿರುವ ಹೆಬ್ಳಿಕರ್ ಯಾವುದೇ ಸದ್ದು ಗದ್ದಲವಿಲ್ಲದೆ ಚಿತ್ರವೊಂದನ್ನು ನಿರ್ದೇಶಿಸಿ ತೆರೆಗೆ ಅಣಿಗೊಳಿಸಿದ್ದಾರೆ. ಮಾನಸ ಆಟ್ರ್ಸ್ ಲಾಂಛನದಡಿಯಲ್ಲಿ ಡಾ.ಅಶೋಕ್ ಪೈ ನಿರ್ಮಿಸಿರುವ “ಮನಮಂಥನ” ಸುರೇಶ ಹೆಬ್ಳಿಕರ್ ನಿರ್ದೇಶನದ ಚಿತ್ರ. ಈ ಚಿತ್ರವು ಇದೇ 17ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. 
 
ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನಟ ರಮೇಶ್ ಭಟ್‍ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು 2015-16ರಲ್ಲಿ ಸಿಕ್ಕಿದೆ. ಚಿತ್ರವು ಎಲ್ಲಾ ವರ್ಗದ ಜನಗಳಿಗೆ ಇಷ್ಟವಾಗಲಿದ್ದು, ಅದರಲ್ಲೂ ವಿಶೇಷವಾಗಿ ಕಾಲೇಜ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತುಂಬಾ ಮೆಚ್ಚುಗೆಯಾಗುತ್ತದೆ ಎಂದಿದ್ದಾರೆ. 
 
ಚಿತ್ರಕ್ಕೆ ಡಾ. ಕೆ.ಎ. ಅಶೋಕ್ ಪೈ ಕಥೆ, ಪಿ. ರಾಜನ್ ಛಾಯಾಗ್ರಹಣ, ಪ್ರವೀಣ್ ಡಿ.ರಾವ್ ಸಂಗೀತ, ಎಂ.ಎನ್. ಸ್ವಾಮಿ ಸಂಕಲನವಿದ್ದು, ಚಿತ್ರ ಕಥೆ, ಸಾಹಿತ್ಯ ಸಂಭಾಷಣೆ, ನಿರ್ದೇಶನ ಸುರೇಶ್ ಹೆಬ್ಳಿಕರ್.  ತಾರಾಗಣದಲ್ಲಿ ಸುರೇಶ್ ಹೆಬ್ಳಿಕರ್, ರಮೇಶ್ ಭಟ್, ಕಿರಣ್ ರಜಪೂತ್, ಅರ್ಪಿತಾ, ಸಂಗೀತ, ಸುಮನ್, ಶ್ರೀಧರ್, ಲಕ್ಷ್ಮೀ ಗೋಪಿನಾಥ್ ಮುಂತಾದವರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ