'ಉಳ್ಳೇನ್ ಅಯ್ಯಾ'ದಿಂದ ನಾನು ಜೈಲು ಸೇರಿದರೂ ಅಚ್ಚರಿಯಿಲ್ಲ: ಕಮಲ್

ಮಂಗಳವಾರ, 28 ಏಪ್ರಿಲ್ 2015 (10:55 IST)
ಕಮಲ್ ಹಾಸನ್ ಸಮಾಜಮುಖಿ ಅಂಶಗಳು ಇರುವಂತಹ ಸಿನಿಮಾಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸಮಾಜದಲ್ಲಿ ಇರುವ ಸಮಸ್ಯೆಗಳ ಅಡಿಯಲ್ಲಿ ನಿರ್ಮಿಸುವ ಚಿತ್ರಗಳನ್ನೇ ತಯಾರು ಮಾಡಲು ಕಮಲ್ ಹೆಚ್ಚು ಇಷ್ಟ ಪಡುತ್ತಾರೆ. ಅಂತಹುದೇ ಕಥಾ ಹಂದರ ಇರುವ ಸಿನಿಮಾವೊಂದನ್ನು ಮಾಡಲು ಕಮಲ್ ಹೆಜ್ಜೆ ಇಟ್ಟಿದ್ದಾರೆ.  
ಇನ್ನು ಕಮಲ್ ಪ್ರಕಾರ, ಜಾತಿ ವ್ಯವಸ್ಥೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, 'ಉಳ್ಳೇನ್ ಅಯ್ಯಾ' ಎಂಬ ಹೆಸರನ್ನಿಡಲು ಸಮ್ಮತಿಯನ್ನೂ ಸೂಚಿಸಿದ್ದಾರೆ. ಉಳ್ಳೇನ್ ಅಯ್ಯಾ ಎಂದರೆ ಇದ್ದೀನಯ್ಯಾ ಎನ್ನುವ ಅರ್ಥವನ್ನು ಹೊಂದಿದೆ. 1968ರಲ್ಲಿ ತಮಿಳುನಾಡಿನಲ್ಲಿ ಕಿಳವೆನ್ಮಣಿ ಎನ್ನುವ ಗ್ರಾಮದಲ್ಲಿ ನಡೆದ  ಘಟನೆಯನ್ನಾಧರಿಸಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತದೆ. 
 
ಇದೇ ಗ್ರಾಮಕ್ಕೆ ಸೇರಿದ ಒಂದೇ ಕುಟುಂಬದ 44 ಮಂದಿ ದಲಿತರನ್ನು ಓರ್ವ ಜಮೀನುದಾರ ಕ್ರೂರವಾಗಿ ಹತ್ಯೆಗೈದಿದ್ದ. ಕಳೆದ ಕೆಲ ದಿನಗಳ ಹಿಂದೆ ಕಮಲ್ ಈ ಘಟನೆಯ ವಿವರ ಆಲಿಸಿದ್ದರಂತೆ. ಅಷ್ಟೇ ಅಲ್ಲದೆ ಯಾವಾಗ ಅದು ನೆನಪಿಗೆ ಬಂದರೂ ಆತಂಕ-ದುಃಖಕ್ಕಕ್ಕೆ ಒಳಗಾಗುತ್ತಿದ್ದಾರಂತೆ. ಜಾತಿ ವ್ಯವಸ್ಥೆ ಎನ್ನುವುದು ಸಮಾಜದ ಒಂದು ರೋಗ. ಅದೆಂದರೆ ತನಗೆ ಅಸಹ್ಯ ಎಂದಿರುವ ಕಮಲ್, ರಾಜಕೀಯ ವ್ಯವಸ್ಥೆಯಲ್ಲಿ ಇರುವ ಕುಲದ ಹೋರಾಟವನ್ನು ಈ ಚಿತ್ರದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಇದೇ ಕಾರಣದಿಂದಲೇ ಈ ಸಿನಿಮಾ ನನ್ನನ್ನು ಜೈಲುಪಾಲು ಮಾಡಿದರೂ ವಿಶೇಷವೇನಿಲ್ಲ ಎಂದಿದ್ದಾರೆ. 
 
ಮಾತು ಮುಂದುವರಿಸಿದ ಕಮಲ್, ಚಿತ್ರವನ್ನು ಓರ್ವ ವಿದ್ಯಾರ್ಥಿ ದೃಷ್ಟಿಕೋನದಲ್ಲಿ  ನಿರ್ಮಿಸಲಾಗುತ್ತಿದ್ದು, ಈಗಾಗಲೇ ಚಿತ್ರಕಥೆಯ ಸ್ಕ್ರಿಪ್ಟ್ ಹಾಗೂ ಸಂಭಾಷಣಾ ಜೋಡಣೆ ಕಾರ್ಯ ಮುಗಿದಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ