ಅಡುಗೆ ಭಟ್ಟನಾಗುತ್ತಿದ್ದಾರೆ ಸೈಫ್ ಆಲಿಖಾನ್

ಶುಕ್ರವಾರ, 27 ನವೆಂಬರ್ 2015 (10:55 IST)
ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಬಹು ಬೇಡಿಕೆಯ ನಟ ಎಂದು ಕರೆಸಿಕೊಳ್ಳುತ್ತಿದ್ದ ಸೈಫ್ ಆಲಿಖಾನ್ ಗೆ ಇತ್ತೀಚಿನ ದಿನಗಳಲ್ಲಿ ಅಂದುಕೊಳ್ಳುವಂತಹ ಪಾತ್ರಗಳ್ಯಾವುವು ದೊರಕಿರಲಿಲ್ಲ.ಆದ್ರೀಗ ಸೈಫ್ ಆಲಿಖಾನ್ ಹತ್ತು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಅವತಾರದಲ್ಲೇ ವಾಪಸ್ಸಾಗುತ್ತಿದ್ದಾರೆ.
 
ಹೌದು... 2005ರಲ್ಲಿ ಬಿಡುಗಡೆಯಾದ ನಮಸ್ತೆ ಲಂಡನ್ ಸಿನಿಮಾದಲ್ಲಿ ಸೈಫ್ ಆಲಿಖಾನ್ ಶೆಫ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಅಂತಹದ್ದೇ ಪಾತ್ರ ಛೋಟಾ ನವಾಬ್ ಪಾಲಿಗೆ ಒಲಿದು ಬಂದಿದೆ. 2014ರಲ್ಲಿ ಹಾಲಿವುಡ್ ನಲ್ಲಿ ತೆರೆಕಂಡಿದ್ದ ಶೆಫ್ ಸಿನಿಮಾ ಇದೀಗ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾದಲ್ಲಿ ಸೈಫ್ ಶೆಫ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಲಿವುಡ್ ಸಿನಿಮಾವಾದರೂ ಭಾರತದ ಆಚಾರ ವಿಚಾರಕ್ಕೆ ಹೊಂದುವಂತೆ ಈ ಸಿನಿಮಾವನ್ನು ನಿರ್ಮಾಣ ಮಾಡುಲಾಗುತ್ತಂತೆ.
 
 ಹಾಲಿವುಡ್ ನ ಶೆಫ್ ಸಿನಿಮಾದಲ್ಲಿ ಲಾಜ್ ಏಂಜಲೀಸ್ ನ ರೆಸ್ಟೋರೆಂಟ್ ಒಂದರ ಶೆಫ್ ಒಬ್ಬನ ಕಥಾ ಹಂದರವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಬಾಲಿವುಡ್ ನಲ್ಲಿ ಈ ಸಿನಿಮಾವನ್ನು ಅಬುದಾಂತಿಯಾ ಎಂಟರ್ ಟೈನ್ ಮೆಂಟ್ ಬ್ಯಾನರ್ ನಡಿ ವಿಕ್ರಮ್ ಮಲ್ಹೋತ್ರಾ ನಿರ್ದೇಶಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ