ಮೈಸೂರು: ಎಲ್ಲಾ ಸರಿ ಹೋಯ್ತು. ಕೊನೆಗೂ ಸಾಹಸ ಸಿಂಹ ವಿಷ್ಣುವಿರ್ಧನ್ ಸಿಂಹಧಾಮ ಸ್ಥಾಪನೆ ಆಗಿಯೇ ಹೋಗುತ್ತದೆ ಎನ್ನುವಾಗ ಮೈಸೂರಿನಲ್ಲಿ ರೈತರ ಪ್ರತಿಭಟನೆ ಕಾವೇರಿದೆ. ನಿಗದಿತ ಸ್ಥಳದಲ್ಲಿ ವಿಷ್ಣು ಸಮಾಧಿ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ.
ಮೈಸೂರಿನ ಆಲೂರ್ ಬಳಿ ಡಿಸೆಂಬರ್ 6 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕು ಸ್ಥಾಪನೆ ಮಾಡುವುದೆಂದು ನಿಗದಿಯಾಗಿದೆ. ಆದರೆ ಆ ಸ್ಥಳ ಕೆಲ ರೈತರ ಕೃಷಿ ಭೂಮಿ ಎಂಬುದು ಆರೋಪ. ಅಲ್ಲಿ ಸಾಗುವಳಿ ಮಾಡುತ್ತಿರುವ ರೈತರು ನಮ್ಮ ಜೀವನೋಪಾಯಕ್ಕೆ ಇರುವ ಏಕೈಕ ಕೃಷಿ ಭೂಮಿಯನ್ನು ಕಿತ್ತುಕೊಂಡರೆ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಬೆದರಿಕೆ ಮಾತ್ರವಲ್ಲದೆ, ಪ್ರತಿಭಟನೆಯಲ್ಲಿ ಪೊಲೀಸರೊಂದಿಗೆ ಚಕಮಕಿ ನಡೆಸಿದ ಕೆಲವು ರೈತರು ವಿಷ ಸೇವಿಸುವ ಯತ್ನವನ್ನೂ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಮಾತ್ರ ಇದು ಸರ್ಕಾರಕ್ಕೆ ಸೇರಿದ ಭೂಮಿಯಾಗಿದ್ದು, ವಾರ್ತಾ ಇಲಾಖೆಯಿಂದ ಇಲ್ಲಿ ವಿಷ್ಣುವರ್ಧನ್ ಸಮಾಧಿಗೆ ಜಾಗ ನೀಡುವಂತೆ ಮನವಿ ಬಂದ ಹಿನ್ನಲೆಯಲ್ಲಿ ಇಲ್ಲಿ ಸ್ಮಾರಕಕ್ಕೆ ಜಾಗ ನಿಗದಿ ಮಾಡಲಾಗಿದೆ ಎಂದಿದ್ದಾರೆ.
ಏನೇ ಆದರೂ, ವಿಷ್ಣು ಸ್ಮಾರಕ ಸುತ್ತ ವಿವಾದಗಳು ಮಾತ್ರ ಬಗೆ ಹರಿಯುತ್ತಿಲ್ಲ. ಈ ನಿಟ್ಟಿನಲ್ಲಿ ಡಿಸೆಂಬರ್ 6 ರಂದು ನಡೆಯಬೇಕಿದ್ದ ಶಂಕು ಸ್ಥಾಪನೆ ಕಾರ್ಯ ಏನಾಗುತ್ತದೋ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ