ಇದಕ್ಕೆ ಚಿತ್ರತಂಡದ ಕಡೆಯಿಂದ ಸಿಗೋ ಉತ್ತರ ಕೂಡಾ ಅಷ್ಟೇ ಮಜವಾಗಿದೆ. ನಿರ್ದೇಶಕ ತೇಜಸ್ವಿ ಹೇಳೋ ಪ್ರಕಾರ ಇದು ಮನೋರಂಜನೆಯ ಎಲ್ಲ ರಸಗಳನ್ನೂ ಕೂಡಾ ಹದ ಮುದವಾಗಿ ಬೆರೆಸಿ ಸಿದ್ಧಗೊಳಿಸಿರೋ ಚಿತ್ರ. ಸೃಜನ್ ಲೋಕೇಶ್ ಅವರಿಗೆ ಲೋಕೇಶ್ ಪ್ರಡಕ್ಷನ್ಸ್ ಬ್ಯಾನರಿನಡಿಯಲ್ಲಿ ಒಂದು ಸಿನಿಮಾ ಮಾಡಬೇಕೆಂಬ ಪ್ರಸ್ತಾಪ ಬಂದಾಗಲೇ ಮಜಾ ಟಾಕೀಸ್ ತಂಡ ಕಥೆಯ ಚರ್ಚೆಗೆ ಚಾಲನೆ ನೀಡಿತ್ತು. ಆ ಬಳಿಕ ಮಾಸ್ ಕಥೆ ಸೇರಿದಂತೆ ನಾನಾ ಥರದ ಕಥೆಗಳೂ ಕೂಡಾ ಚರ್ಚೆಗೆ ಬಂದಿದ್ದವು. ಆದರೆ ಒಂದೇ ಮಾದರಿಯ ಕಥೆ ಹೊಸೆಯೋದಕ್ಕಿಂತ ಎಲ್ಲ ಬಗೆಯ ಅಂಶಗಳನ್ನೂ ಸೇರಿಸಿ ಚಿತ್ರ ಮಾಡಿದರೇ ಉತ್ತಮ ಎಂಬಂಥಾ ಒಕ್ಕೊರಲಿನ ಅಭಿಪ್ರಾಯವೇ ಕೇಳಿ ಬಂದಿತ್ತು.
ಅದಾದ ನಂತರ ನಿರ್ದೇಶಕ ತೇಜಸ್ವಿ ರೂಪಿಸಿದ್ದ ಎಲ್ಲಿದ್ದೆ ಇಲ್ಲಿತನಕ ಕಥೆಯನ್ನು. ಇದರಲ್ಲಿ ಮನೋರಂಜನೆಯನ್ನೇ ಮೂಲ ಉದ್ದೇಶವಾಗಿಸಿಕೊಂಡಿರೋ ಗಟ್ಟಿ ಕಥೆಯಿದೆ. ಪ್ರೀತಿ, ಫ್ಲಾಮಿಲಿ ಸೆಂಟಿಮೆಂಟು ಸೇರಿದಂತೆ ಎಲ್ಲವನ್ನೂ ಒಳಗೊಂಡಿರೋ ಎಲ್ಲಿದ್ದೆ ಇಲ್ಲಿತನಕ ರೊಮ್ಯಾಂಟಿಕ್ ಕಾಮಿಡಿ ಜಾನರಿನ ಚಿತ್ರ ಎನ್ನಲಡ್ಡಿಯಿಲ್ಲ. ಇಲ್ಲಿ ಸೃಜನಾ ನಾನಾ ಭಾವಗಳ ಶೇಡುಗಳಿರೋ ಪಾತ್ರದಲ್ಲಿಯೂ ಅಚ್ಚರಿದಾಯಕವಾಗಿ ನಟಿಸಿದ್ದಾರಂತೆ. ಅದೆಲ್ಲದರ ಅಸಲೀ ಹೂರಣ ಇದೇ ತಿಂಗಳ 11ರಂದು ಪ್ರೇಕ್ಷಕರೆದುರು ಅನಾವರಣಗೊಳ್ಳಲಿದೆ.