ಈ ವಾರ 'ಗನ್' ಮರು ಬಿಡುಗಡೆ ಸೇರಿ ನಾಲ್ಕು ಚಿತ್ರಗಳು ತೆರೆಗೆ

PR
ತಿಂಗಳ ಹಿಂದೆ ಬಿಡುಗಡೆ ಮಾಡಿದ್ದ 'ಗನ್' ಚಿತ್ರ ಎರಡು ವಾರ ಪ್ರದರ್ಶನ ಕಂಡ ಬಳಿಕ ಅದನ್ನು ಚಿತ್ರಮಂದಿರದಿಂದ ಎತ್ತಂಗಡಿ ಮಾಡುವ ಮಾತು ಬಂದಾಗ ಚಿತ್ರದ ನಾಯಕ ಹಾಗೂ ನಿರ್ದೇಶಕ ಹರೀಶ್‌ ರಾಜ್ ಬೆಂಗಳೂರಿನ 'ಸಂತೋಷ್' ಚಿತ್ರಮಂದಿರದ ಮೇಲಿನ ಮಹಡಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಹಳೆಯ ಸುದ್ದಿ.

ಆ ನಂತರ 'ಗನ್' ಚಿತ್ರ ಎಲ್ಲಿಗೆ ಹೋಯಿತು? ಏನಾಯಿತು? ಎನ್ನುವುದು ಗೊತ್ತೇ ಆಗಿಲ್ಲ ಎನ್ನಬೇಡಿ. ಹರೀಶ್‌ ರಾಜ್ ಮತ್ತೆ 'ಗನ್' ಹಿಡಿದು ರೆಡಿಯಾಗಿದ್ದಾರೆ. ಈ ವಾರ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.

ಏನೇ ಆದರೂ ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸಲೇ ಬೇಕು ಎಂಬ ಹಠದಲ್ಲಿದ್ದಾರೆ ಹರೀಶ್‌ ರಾಜ್. ಹಿಂದೆ ಸಂತೋಷ್ ಚಿತ್ರಮಂದಿರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದರೆ ಈ ಬಾರಿ ಅಪರ್ಣಾ (ಅನುಪಮ) ಚಿತ್ರಮಂದಿರದ ಮೊರೆ ಹೋಗಿದ್ದಾರೆ. ಚಿತ್ರವನ್ನು ನೋಡಿ ಪ್ರೋತ್ಸಾಹಿಸಿರಿ ಎಂದು ಪ್ರೇಕ್ಷಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಹರೀಶ್‌ ರಾಜ್ ವಿನಂತಿಸಿಕೊಂಡಿದ್ದಾರೆ.

'ಗನ್' ಚಿತ್ರವನ್ನು ಸೇರಿಸಿದರೆ ಈ ವಾರ ತೆರೆಕಾಣುತ್ತಿರುವ ಚಿತ್ರಗಳ ಸಂಖ್ಯೆ ಬರೋಬ್ಬರಿ ನಾಲ್ಕು. ಈಗಾಗಲೇ ಹಾಡಿನ ಮೂಲಕ ಗಮನ ಸೆಳೆದಿರುವ 'ಸಂಜು ವೆಡ್ಸ್ ಗೀತಾ', ದರ್ಶನ್ ಅವರ 'ಪ್ರಿನ್ಸ್' ಹಾಗೂ 'ಜರ್ನಿ' ಉಳಿದ ಮೂರು ಚಿತ್ರಗಳು.

ಇವುಗಳಲ್ಲಿ 'ಸಂಜು ವೆಡ್ಸ್ ಗೀತಾ' ಒಂದು ಲವ್ ಸ್ಟೋರಿಯಾದರೆ ದರ್ಶನ್ ಅವರ 'ಪ್ರಿನ್ಸ್' ಪಕ್ಕಾ ಆಕ್ಷನ್ ಸ್ಟೋರಿ. ನಾಲ್ಕು ಚಿತ್ರಗಳ ಪೈಕಿ ಈ ಎರಡು ಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಸ್ವಲ್ಪ ಮಟ್ಟಿನ ಕುತೂಹಲವಿದೆ.

ಇತ್ತೀಚಿನ ವಾರಗಳಲ್ಲಿ ಕೇವಲ ಒಂದೆರಡು ಸಿನಿಮಾಗಳಷ್ಟೇ ತೆರೆ ಕಾಣುತ್ತಿದ್ದವು. ಅವೂ ಕೂಡ ಯಾವುದೇ ದೊಡ್ಡ ಸ್ಟಾರ್‌ಗಳ ಅಥವಾ ದೊಡ್ಡ ಬ್ಯಾನರಿನ ಚಿತ್ರಗಳಲ್ಲ. ವಿಶ್ವ ಕಪ್ ಕ್ರಿಕೆಟ್ ಟೂರ್ನಿ ಮುಕ್ತಾಯ ಘಟ್ಟಕ್ಕೆ ಬರುತ್ತಿರುವುದರಿಂದ ಒಂದೊಂದೇ ಚಿತ್ರಗಳು ಡಬ್ಬಾದಿಂದ ಹೊರ ಬರಲಾರಂಭಿಸಿವೆ.

ವೆಬ್ದುನಿಯಾವನ್ನು ಓದಿ