'ಬಾಂಡ್' ಠುಸ್, ಗುರುವಾರದಿಂದ 'ಕಠಾರಿ' ಅಬ್ಬರ

SUJENDRA
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಹುನಿರೀಕ್ಷೆಯ 'ಅಣ್ಣಾ ಬಾಂಡ್' ಕೊನೆಗೂ ಪ್ರೇಕ್ಷಕರ ಅತಿ ನಿರೀಕ್ಷೆಯನ್ನು ಮುಟ್ಟಲೇ ಇಲ್ಲ. ಈಗ ಇನ್ನೊಂದು ಬಹುನಿರೀಕ್ಷೆಯ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ 'ಕಠಾರಿ ವೀರ ಸುರಸುಂದರಾಂಗಿ' ಸರದಿ. ಇದರ ಹಣೆಬರಹ ಇದೇ ವಾರ ನಿರ್ಧಾರವಾಗಲಿದೆ.

ರೆಬೆಲ್ ಸ್ಟಾರ್ ಅಂಬರೀಷ್, ಲಕ್ಕಿ ಸ್ಟಾರ್ ರಮ್ಯಾ ಪ್ರಮುಖ ಪಾತ್ರಗಳಲ್ಲಿರುವ 'ಕಠಾರಿ ವೀರ ಸುರಸುಂದರಾಂಗಿ' ಮೇ 10ರ ಗುರುವಾರದಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಕಥೆ ಮುನಿರತ್ನ ಅವರದ್ದು. ಚಿತ್ರಕಥೆ, ಸಂಭಾಷಣೆ ಉಪೇಂದ್ರ ಮತ್ತು ಜನಾರ್ದನ ಮಹರ್ಷಿ ಬರೆದಿದ್ದಾರೆ. ಸುರೇಶ್ ಕೃಷ್ಣ ನಿರ್ದೇಶನ, ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.

180 ಚಿತ್ರಮಂದಿರಗಳಲ್ಲಿ ಬಿಡುಗಡೆ...
ಮೇ 10ರ ಗುರುವಾರದಂದು ಕಠಾರಿ ವೀರ ಕರ್ನಾಟಕದ 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ನೆನಪಿಡಿ, ಈ ಎಲ್ಲಾ ಥಿಯೇಟರುಗಳಲ್ಲೂ 3ಡಿ ಚಿತ್ರಗಳೇ ಇರುತ್ತವೆ ಎಂದು ಭಾವಿಸಬೇಡಿ. ಒಟ್ಟು 56 ಕಡೆ ಮಾತ್ರ 3ಡಿ ಲಭ್ಯ. ಉಳಿದೆಡೆ 2ಡಿ ಮಾತ್ರ.

ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಹಾಸನಗಳಂತಹ ನಗರಗಳ ಪ್ರಮುಖ ಚಿತ್ರಮಂದಿರಗಳಲ್ಲಿ 3ಡಿ ವ್ಯವಸ್ಥೆ ಮಾಡಲಾಗಿದೆ.

ದುಬೈಯಲ್ಲೂ ರಿಲೀಸ್...
ಅಣ್ಣಾ ಬಾಂಡ್ ಬಿಡುಗಡೆಯಾಗಿ ಯಶಸ್ವಿಯಾಗಿರುವ ಬೆನ್ನಿಗೆ ಕಠಾರಿ ಕೂಡ ದುಬೈಯಲ್ಲಿ ಬಿಡುಗಡೆಯಾಗಲಿರುವ ಮಾಹಿತಿಯನ್ನು ಮುನಿರತ್ನ ನೀಡಿದ್ದಾರೆ. ಆದರೆ ಯಾವಾಗ ಬಿಡುಗಡೆ ಅನ್ನೋದನ್ನು ಇನ್ನೂ ಕಠಾರಿ ಟೀಮ್ ನಿರ್ಧರಿಸಿಲ್ಲ. ಥಿಯೇಟರುಗಳ ಕುರಿತು ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಇದು ಗೊತ್ತಾಗಲಿದೆ. ವಿದೇಶಗಳಲ್ಲೂ ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇದೆ ಎನ್ನುವುದನ್ನು ನಾವು ತೋರಿಸುತ್ತೇವೆ ಎಂದು ಮುನಿರತ್ನ ಹೇಳಿದ್ದಾರೆ.

ಬುಧವಾರವೇ ಟಿಕೆಟ್...
'ಕಠಾರಿ ವೀರ ಸುರಸುಂದರಾಂಗಿ'ಯ ಅವತಾರವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಅದಕ್ಕಾಗಿ ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಲೂ ರೆಡಿಯಿದ್ದಾರೆ. ಇದನ್ನು ಗಮನಿಸಿರುವ ಚಿತ್ರಮಂದಿರಗಳು, ಹಿಂದಿನ ದಿನವೇ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಿವೆ.

ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಕಠಾರಿ ಟಿಕೆಟ್ ಮೇ 9ರ ಬುಧವಾರದಂದೇ ಲಭ್ಯ. ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ಆನ್‌ಲೈನ್‌ನಲ್ಲೂ ಸಿಗುತ್ತಿದೆ.

ಟಿಕೆಟ್ ದರವೆಷ್ಟು?
ಸಾಮಾನ್ಯ ಕನ್ನಡ ಚಿತ್ರದ ದುಪ್ಪಟ್ಟು ಟಿಕೆಟ್ ದರ ಕಠಾರಿ ವೀರನಿಗಿರಬಹುದು ಎಂದು ಹೇಳಲಾಗುತ್ತಿದೆ. ಆದರೂ ಇದುವರೆಗೆ ಟಿಕೆಟ್ ದರವೆಷ್ಟು ಅನ್ನೋದು ಬಹಿರಂಗವಾಗಿಲ್ಲ.

2ಡಿ ಆವೃತ್ತಿಯ 'ಕಠಾರಿ..'ಗೆ ಮಾಮೂಲಿ ಚಿತ್ರಕ್ಕಿಂತ ಹೆಚ್ಚಿರಬಹುದು. ಅದೇ ರೀತಿ 3ಡಿಗೆ, ಮಾಮೂಲಿ ಚಿತ್ರಕ್ಕಿಂತ ಡಬ್ಬಲ್ ಇರಬಹುದು. ಈ ಬಗ್ಗೆ ಕೆಲ ದಿನಗಳ ಹಿಂದೆಯೇ ನಿರ್ಮಾಪಕ ಮುನಿರತ್ನ ಸುಳಿವು ನೀಡಿದ್ದರು. ನಿರ್ಮಾಣ ವೆಚ್ಚ, 3ಡಿ ವ್ಯವಸ್ಥೆ, 3ಡಿ ಕನ್ನಡಕಗಳ ದರಗಳನ್ನು ಲೆಕ್ಕಾಚಾರ ಹಾಕಿ ಪ್ರೇಕ್ಷಕರಿಗೆ ಹೊರೆಯಾಗದಂತೆ ಟಿಕೆಟ್ ದರ ಹೆಚ್ಚಿಸಲಾಗುತ್ತದೆ ಎಂದಿದ್ದರು.

ಮಿಡ್‌ನೈಟ್ ಈಗಿಲ್ಲ...
ಮಧ್ಯರಾತ್ರಿಯೇ ಚಿತ್ರ ಬಿಡುಗಡೆ ಮಾಡುವ ಮನಸ್ಸೀಗ ಮುನಿರತ್ನರಿಗೆ ಇದ್ದಂತಿಲ್ಲ. ನಾವು ಯಾರಿಗೂ ಸ್ಪರ್ಧೆ ಕೊಡುತ್ತಿಲ್ಲ, ಯಾರನ್ನೂ ಅನುಕರಿಸುತ್ತಿಲ್ಲ ಎಂದು ಹೇಳುವ ಮೂಲಕ ಅಣ್ಣಾ ಬಾಂಡ್ ಬೆಳ್ಳಂಬೆಳಗ್ಗೆ ಪ್ರದರ್ಶನವಾಗಿರುವುದಕ್ಕೆ ಪೈಪೋಟಿ ನೀಡುತ್ತಿಲ್ಲ ಎಂಬರ್ಥದಲ್ಲಿ ಮುನಿರತ್ನ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ