ಅಕ್ಟೋಬರ್ 28 ಕ್ಕೆ ಸಿನಿಪ್ರಿಯರಿಗೆ ಹಬ್ಬ!

ಮಂಗಳವಾರ, 18 ಅಕ್ಟೋಬರ್ 2016 (09:48 IST)
ಬೆಂಗಳೂರು: ಚಿತ್ರ ರಸಿಕರಿಗೆ ಈ ಬಾರಿಯ ದೀಪಾವಳಿ ಹಬ್ಬದಂದು ಭರ್ಜರಿ ಕೊಡುಗೆ ಸಿಗುತ್ತಿದೆ. ಕನ್ನಡ ಮತ್ತು ಹಿಂದಿಯಲ್ಲಿ ಅಕ್ಟೋಬರ್ 28ಕ್ಕೆ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದೆ.

ಕನ್ನಡದಲ್ಲಿ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಮುಕುಂದ ಮುರಾರಿ’ ಮತ್ತು ರಿಯಲ್ ಲೈಫ್ ಜೋಡಿ ಯಶ್ ಮತ್ತು ರಾಧಿಕಾ ಅಭಿನಯದ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರಗಳು ಒಂದೇ ದಿನ ತೆರೆ ಕಾಣುತ್ತಿದೆ.

‘ಮುಕುಂದ ಮುರಾರಿ’ ಚಿತ್ರ ಹಿಂದಿಯ ‘ಓ ಮೈ ಗಾಡ್’ ಚಿತ್ರದ ರಿಮೇಕ್. ಇದರಲ್ಲಿ ಸುದೀಪ್ ಕೃಷ್ಣನಾಗಿ, ಉಪೇಂದ್ರ ಭಕ್ತನಾಗಿ ಪಾತ್ರ ನಿರ್ವಹಿಸಿದ್ದಾರೆ. ಇವರಿಬ್ಬರು ಸ್ಟಾರ್ ನಟರು ಜತೆಯಾಗಿ ನಟಿಸುತ್ತಿರುವ ಮೊದಲ ಚಿತ್ರ ಇದು ಎಂಬುದು ವಿಶೇಷ.

ಇನ್ನೊಂದೆಡೆ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿರುವ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಮತ್ತು ರಾಕಿಂಗ್ ಸ್ಟಾರ್ ಯಶ್ ತಮ್ಮ ಮದುವೆಗೆ ಮೊದಲು ಅಭಿಮಾನಿಗಳಿಗೆ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಮೂಲಕ ರಸದೌತಣ ನೀಡಲಿದ್ದಾರೆ.

ಇದರ ನಡುವೆ ಬಾಲಿವುಡ್ ಪ್ರೇಮಿಗಳಿಗಾಗಿ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರವೂ ಅದೇ ದಿನ ತೆರೆ ಕಾಣಲಿದೆ.  ಇದರಲ್ಲಿ ಐಶ್ವರ್ಯ ರೈ ಮತ್ತು ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ, ಪಾಕಿಸ್ತಾನ ತಾರೆ ಫವಾದ್ ಖಾನ್ ನಟಿಸಿದ್ದರಿಂದ ಕೆಲವು ರಾಜ್ಯಗಳಲ್ಲಿ ಈ ಚಿತ್ರ ಪ್ರದರ್ಶಿಸದಿರಲು ಭಾರತೀಯ ಚಿತ್ರ ಮಾಲಿಕರ ಪ್ರದರ್ಶಕರ ಸಂಘ ತೀರ್ಮಾನಿಸಿದೆ. ಹೀಗಾಗಿ ಇದು ನಿಷೇಧದ ಭೀತಿಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ