ಬೆಂಗಳೂರು: ದೀಪಾವಳಿಗೆ ವೀಕೆಂಡ್ ರಜೆ. ಸ್ವಲ್ಪ ಮಜಾ ಮಾಡಬೇಕೆಂದಿದ್ದವರಿಗೆ ಈ ವಾರ ಸ್ಯಾಂಡಲ್ ವುಡ್ ಎರಡು ಭರ್ಜರಿ ಸಿನಿಮಾಗಳನ್ನು ನೀಡುತ್ತಿದೆ.
ಪಕ್ಕಾ ಮಾಸ್ ಸಿನಿಮಾ ನೋಡಬೇಕೆಂದಿರುವವರು ರಾಧಿಕಾ ಪಂಡಿತ್ ಮತ್ತು ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ನೋಡಬಹುದು. ಇವರಿಬ್ಬರು ರಿಯಲ್ ಲೈಫ್ ಜೋಡಿಯಾಗುವುದಕ್ಕೆ ಮೊದಲು ಮಾಡುತ್ತಿರುವ ಸಿನಿಮಾ ಇದು ಎನ್ನುವ ಕಾರಣಕ್ಕೆ ಮಾತ್ರವಲ್ಲ. ಹಲವು ಕಾರಣಗಳಿಗೆ ಈ ಚಿತ್ರ ಸುದ್ದಿ ಮಾಡುತ್ತಿದೆ.
ಅದ್ಧೂರಿ ಬಜೆಟ್ ನ ಸಿನಿಮಾ. ಅದ್ಭುತ ಲೊಕೇಶನ್, ಥ್ರಿಲ್, ರೊಮ್ಯಾನ್ಸ್ ಎಲ್ಲವೂ ಇದರಲ್ಲಿದೆ. ಇದರ ಟ್ರೇಲರ್ ಬಿಡುಗಡೆಯಾಗಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ರಾಧಿಕಾ ಪಂಡಿತ್ ಡಬಲ್ ರೋಲ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ತೇಲಿ ಬರುತ್ತಿದೆ. ಯಾವುದು ಸತ್ಯ ಎಂದು ತಿಳಿಯಬೇಕಿದ್ದರೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಬಹುದು.
ಇನ್ನೊಂದು ಉಪೇಂದ್ರ-ಕಿಚ್ಚ ಸುದೀಪ್ ಕಾಂಬಿನೇಷನ್ ನ ಚಿತ್ರ “ಮುಕುಂದ ಮುರಾರಿ”. ಮಾಡರ್ನ್ ಯುಗಕ್ಕೆ ಕೊಂಚ ದೇವರ ಟಚ್ ಇರುವ ಸಿನಿಮಾ. ಚಿತ್ರದ ತುಣುಕುಗಳನ್ನು ನೋಡುತ್ತಿದ್ದರೆ ಉಪೇಂದ್ರ ಅವರ ಟಿಪಿಕಲ್ ಸಿನಿಮಾದಂತೆ ಕಾಣುತ್ತಿದೆ. ಸುದೀಪ್ ಮಾತ್ರ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಸ್ವತಃ ಉಪೇಂದ್ರ ಇದು ತಮ್ಮ ಎ ಚಿತ್ರದ ಮುಂದುವರಿದ ಭಾಗ ಎಂದಿದ್ದಾರೆ.
ಕನ್ನಡ ಸಿನಿಮಾ ಬೇಡ ಹಿಂದಿ ನೊಡಬೇಕು ಎನ್ನುವವರಿಗೆ ಅಲ್ಲೂ ಎರಡು ಚಿತ್ರಗಳಿವೆ. ಭಾರೀ ವಿವಾದವೆಬ್ಬಿಸಿದ ಚಿತ್ರ “ಏ ದಿಲ್ ಮುಷ್ಕಿಲ್” ಮತ್ತು ಸಾಹಸ ಪ್ರಿಯರಿಗಾಗಿ ಅಜಯ್ ದೇವಗನ್ ಅವರ “ಶಿವಾಯ್” ಚಿತ್ರ. ಆದರೆ ಟಿಕೆಟ್ ದರ ಮಾತ್ರ ದುಪ್ಪಟ್ಟಾಗಿದೆ ಎಂಬ ಸುದ್ದಿಗಳೂ ಬಂದಿವೆ. ಯಾವುದು ಬೇಕೋ ಅದನ್ನು ಆರಿಸಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ