ಎಕೆ 56 ಚಿತ್ರವಿಮರ್ಶೆ; ಆಕ್ಷನ್ ಪ್ರಿಯರಿಗೆ ಬಾಡೂಟ

SUJENDRA


ಚಿತ್ರ: ಎಕೆ 56
ತಾರಾಗಣ: ಸಿದ್ಧಾಂತ್, ಶಿರಿನ್, ಸುಮಲತಾ ಅಂಬರೀಷ್, ಅತುಲ್ ಕುಲಕರ್ಣಿ
ನಿರ್ದೇಶನ: ಓಂ ಪ್ರಕಾಶ್ ರಾವ್
ಸಂಗೀತ: ಅಭಿಮಾನ್ ರಾಯ

ಎಕೆ 47 ತೆರೆಗಿಳಿಸಿದ 10 ವರ್ಷಗಳ ನಂತರ ಓಂ ಪ್ರಕಾಶ್ ರಾವ್ 'ಎಕೆ 56'ನೊಂದಿಗೆ ಬಂದಿದ್ದಾರೆ. ಹೆಸರಿನಲ್ಲಿ ಬದಲಾವಣೆಯಿರುವಂತೆ ಚಿತ್ರದಲ್ಲೂ ಬದಲಾವಣೆಯಿದೆ. ಅದೇ ಹಳಸಲು ಚಿತ್ರಾನ್ನದ ಬದಲು ಹೊಸ ವಿಷಯದೊಂದಿಗೆ ಬಂದಿದ್ದಾರೆ. ಆ ಮೂಲಕ ತನ್ನ 25ನೇ ಚಿತ್ರವನ್ನು ವಿಶಿಷ್ಟವನ್ನಾಗಿಸಿದ್ದಾರೆ ರಾವ್.

SUJENDRA


ಈ ಬಾರಿ ಅವರು ಆರಿಸಿಕೊಂಡಿರುವುದು ಭಯೋತ್ಪಾದನೆಯ ಎಸಳು. ಭಾರತದ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಅಮಾಯಕರು ಭಯೋತ್ಪಾದನೆ ಹೆಸರಿನಲ್ಲಿ ಹೇಗೆ ಬಲಿಪಶುಗಳಾಗುತ್ತಿದ್ದಾರೆ ಎಂಬ ಸಾಲಿನಲ್ಲಿ ಚಿತ್ರ ಸಾಗುತ್ತದೆ.

ಅಜಯ್ (ಸಿದ್ದಾಂತ್) ಕಾರು ಕಂಪನಿಯೊಂದರ ಅಧಿಕಾರಿ. ತನಗೆ ಗೊತ್ತೇ ಇಲ್ಲದ ಸಂಗತಿಯೊಂದರಲ್ಲಿ ಹೇಗೋ ಸಿಕ್ಕಿ ಬಿದ್ದು ಪೊಲೀಸರ ಕಣ್ಣಲ್ಲಿ ಭಯೋತ್ಪಾದಕ ಪಟ್ಟಕ್ಕೇರುತ್ತಾನೆ. ಅಜಯ್ ಅಮಾಯಕತೆಗೆ ಖಾಕಿಗಳು ಬೆಲೆಯನ್ನೇ ಕೊಡುವುದಿಲ್ಲ. ಮೌನ ರೋದನಕ್ಕೆ ಪ್ರತಿಕ್ರಿಯೆಯೇ ಇರುವುದಿಲ್ಲ. ವಿಚಾರಣೆಯೇ ಇಲ್ಲದೆ ಉಗ್ರರ ಪಟ್ಟಿಗೆ ಸೇರಿ ಹೋಗುತ್ತಾನೆ ನಾಯಕ.

SUJENDRA


ಆತನದ್ದೋ, ಗಾಂಧಿವಾದಿಗಳ ಕುಟುಂಬ. ಸ್ವತಃ ಗಾಂಧೀಜಿ ಬಂದಿದ್ದ ಮನೆಯಲ್ಲಿ ಆಡಿ ಬೆಳೆದವನು ಅಜಯ್. ಹೀಗಿದ್ದವನು ಭಯೋತ್ಪಾದಕನಾಗಿ ಜೈಲು ಸೇರಿದರೆ ಪರಿಸ್ಥಿತಿ ಹೇಗಿರಬೇಡ? ತಾಯಿ ಸರಸ್ವತಿ (ಸುಮತಾ) ತೀರಾ ಕಂಗೆಟ್ಟಿರುತ್ತಾಳೆ. ಮಗನನ್ನು ಹೇಗಾದರೂ ಮಾಡಿ ರಕ್ಷಿಸಲೇ ಬೇಕು ಎಂದವಳೇ, ಜೈಲಿನಿಂದ ತಪ್ಪಿಸಿಕೊಳ್ಳಲು ನಾಲ್ವರನ್ನು ನೇಮಿಸುತ್ತಾಳೆ. ಅದರಲ್ಲಿ ಯಶಸ್ವಿಯೂ ಆಗುತ್ತಾಳೆ.

ಅಜಯ್ ಜೈಲಿನಿಂದ ಹೊರಗೆ ಬರುತ್ತಾನೆ. ಆದರೆ ಅಷ್ಟರಲ್ಲೇ ನಡೆಯಬೇಕಿದ್ದ ದುರಂತವೊಂದನ್ನು ತಪ್ಪಿಸುತ್ತಾನೆ. ಅದಕ್ಕೆ ಕಾರಣರಾದವರನ್ನು ಪತ್ತೆ ಮಾಡುತ್ತಾನೆ. ಕೊನೆಗೆ ನ್ಯಾಯಾಲಯದಲ್ಲಿ ನ್ಯಾಯವನ್ನೂ ಪಡೆಯುತ್ತಾನೆ. ಭಯೋತ್ಪಾದಕ ಪಟ್ಟ ಕಳಚಿ ಆರೋಪ ಮುಕ್ತನಾಗುತ್ತಾನೆ.

SUJENDRA


ಈ ಕಥೆಯ ಆಕ್ಷನ್ ಚಿತ್ರವೆಂದ ಮೇಲೆ ಅಲ್ಲಿ ಧಾಂಧೂಂ ನಿರೀಕ್ಷಿತ. ಅದರಲ್ಲೂ ನಿರ್ಮಾಪಕರು 12 ಕೋಟಿ ರೂಪಾಯಿಗಳನ್ನು ಸುರಿದಿದ್ದಾರೆ. ಅದು ಪ್ರತಿ ಫ್ರೇಮಿನಲ್ಲೂ ಕಂಡು ಬರುತ್ತದೆ. ಅದ್ಧೂರಿತನಕ್ಕೆ ಎಲ್ಲೂ ಕೊರತೆಯಾಗಿಲ್ಲ. ಅದ್ಭುತ ಚೇಸಿಂಗ್‌ಗಳು ಸೀಟಿನ ತುದಿಯಲ್ಲಿ ಕೂರುವಂತೆ ಮಾಡುತ್ತವೆ. ಟಾಟಾ ಸುಮೋಗಳ ಡಿಕ್ಕಿ ದೃಶ್ಯವಂತೂ ರೋಚಕ.

ಕಮರ್ಷಿಯಲ್ ಚಿತ್ರಗಳ ಸರದಾರ ಓಂ ಪ್ರಕಾಶ್ ರಾವ್ ಎಲ್ಲಾ ವಿಭಾಗಗಳಲ್ಲೂ ಗೆದ್ದಿದ್ದಾರೆ, ಒಂದನ್ನು ಬಿಟ್ಟು. ಅದು ನಾಯಕ. ಸಿದ್ಧಾಂತ್ ಬದಲಿಗೆ ದರ್ಶನ್ ಅಥವಾ ಬೇರೆ ಯಾರಾದರೂ ದೊಡ್ಡ ಹೀರೋಗಳು ಇಲ್ಲಿ ನಾಯಕರಾಗಿದ್ದಿದ್ದರೆ ಕಥೆಯೇ ಬೇರೆಯಾಗಿರುತ್ತಿತ್ತು. ಅದೊಂದು ಕೊರತೆ ಚಿತ್ರ ನೋಡಿದ ನಂತರವೂ ಪ್ರೇಕ್ಷಕರನ್ನು ಕಾಡುತ್ತದೆ.

SUJENDRA


ಸೆಕ್ಸಿ ಪಾತ್ರಗಳಲ್ಲೇ ಮಿಂಚುತ್ತಿರುವ ಶಿರಿನ್‌ರನ್ನು ಓಂ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಸುಮಲತಾ ಬಗ್ಗೆ ಎರಡು ಮಾತಿಲ್ಲ. ಅಭಿಮಾನ್ ರಾಯ್ ಸಂಗೀತದ ಎರಡು ಹಾಡುಗಳನ್ನು ಸಹಿಸಿಕೊಳ್ಳಬಹುದು.

ಉಳಿದಂತೆ ಎಲ್ಲವೂ ಆಕ್ಷನ್, ಆಕ್ಷನ್, ಆಕ್ಷನ್. ನಿಮಗೂ ಹೊಡೆದಾಟ-ಬಡಿದಾಟ ಇಷ್ಟವೆಂದಾದರೆ 'ಎಕೆ 56' ಒಮ್ಮೆ ಖಂಡಿತಾ ನೋಡಬಹುದು.

ವೆಬ್ದುನಿಯಾವನ್ನು ಓದಿ