'ಪ್ಯಾರ್ಗೆ ಆಗ್ಬಿಟ್ಟೈತೆ...' ಹಾಡಿನ ಯಶಸ್ಸನ್ನು ಲಾಭವಾಗಿ ಪರಿವರ್ತಿಸಲು ನಿರ್ದೇಶಕ ಪವನ್ ಒಡೆಯರ್ ಮತ್ತು ನಾಯಕ ಕೋಮಲ್ ಕುಮಾರ್ ವಿಫಲರಾಗಿದ್ದಾರೆ ಎಂದು ಹೇಳಿದರೆ, ಅಲ್ಲಿಗೆ ವಿಮರ್ಶೆ ಬಹುತೇಕ ಮುಗಿದಂತೆ. ಅಷ್ಟು ಕೆಟ್ಟದಾಗಿ ನಿರ್ದೇಶಿಸಿದ್ದಾರೆ ಪವನ್, ನಟಿಸಿದ್ದಾರೆ ಕೋಮಲ್!
ಒಂದೊಳ್ಳೆ ಸಿನಿಮಾ ಮಾಡಬಹುದಾಗಿದ್ದ ಕಥೆಯನ್ನು ಕೈಯಲ್ಲಿಟ್ಟುಕೊಂಡ ಪವನ್, ಕೋಮಲ್ ಬಂಡವಾಳಕ್ಕೆ ಉಪ್ಪು-ಖಾರ ಸುರಿದು ಎಲ್ಲವನ್ನೂ ಕೆಡವಿದ್ದಾರೆ. ನೇರವಾಗಿಯೇ ಹೇಳುವುದಿದ್ದರೆ, ಸಾಫ್ಟ್ವೇರ್ ಕ್ಷೇತ್ರದಲ್ಲಿದಂತಹ ಹಿಡಿತ ಅವರಿಗೆ ಬಣ್ಣದ ಲೋಕದಲ್ಲಿ ಸಿಕ್ಕಿಲ್ಲ. ಅಷ್ಟೇ ಇದ್ದಿದ್ದರೆ ಪರವಾಗಿಲ್ಲ, ಕೌಟುಂಬಿಕ ಪ್ರೇಕ್ಷಕರು ಚಿತ್ರಮಂದಿರದತ್ತ ತಲೆ ಹಾಕಿ ಮಲಗಲೇ ಬಾರದು ಎಂಬಂತಹ ಕೆಟ್ಟ ಸಂಭಾಷಣೆಗಳನ್ನು ತುರುಕಿದ್ದಾರೆ!
SUJENDRA
ದೊಡ್ಡ ಕಟ್ಟಡದ ಮೇಲೆ ಆತ್ಮಹತ್ಯೆ ಕ್ಷಣಗಳನ್ನು ಎಣಿಸುತ್ತಿರುವ ಗೋವಿಂದು (ಕೋಮಲ್ ಕುಮಾರ್). ಇನ್ನೇನು ಏನೋ ಆಗುತ್ತದೆ ಅನ್ನೋವಾಗ ಅಲ್ಲಿಗೆ ಪ್ರೀತಿಯಲ್ಲಿ ಸೋತ ಸಾಫ್ಟ್ವೇರ್ ಕಾರ್ತಿಕ್ (ಹರೀಶ್ ರಾಜ್) ಬರುತ್ತಾನೆ. ಅವನೂ ಬಂದಿರುವುದು ಆತ್ಮಹತ್ಯೆಗೆ. ಆದರೆ ಇಬ್ಬರದ್ದೂ ಕಥೆ ಹೇಳುವ-ಕೇಳುವ ಸರದಿಯಾಗುತ್ತದೆ.
ಚಾಲಾಕಿ ಗೋವಿಂದನದ್ದು ನಾಲ್ವರು ಹುಡುಗಿಯರ ಪ್ರೀತಿ. ಮೊದಲನೆಯವಳು ವೈದೇಹಿ (ಮಧುಲಿಕಾ). ಆಕೆಗೆ ಸೋಡಾ ಚೀಟಿ ಕೊಟ್ಟ ನಂತರ ಮಮ್ತಾಜ್ಳಿಗೂ (ಪಾರುಲ್ ಯಾದವ್) ಕೈ ಕೊಡಲು ಕಾರಣ ಸಿಗುತ್ತದೆ. ಮೂರನೇಯವಳು ಸ್ಟೈಸಿ (ಅನಾ ಜಾರ್ಜಿಯಾ). ಇಷ್ಟೂ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡು ಕೈಗೆ ಚೊಂಬು ಕೊಡುವ ಗೋವಿಂದ, ಕೊನೆಯ ಹುಡುಗಿ ಶೀಲಾ (ರೇಖಾ) ಜತೆ ಏಗುವುದಿಲ್ಲ.
SUJENDRA
ಅಷ್ಟೂ ಮಂದಿಗೆ ಮೋಸ ಮಾಡಿದರೂ, ಶೀಲಾಳಿಗೆ ಗೋವಿಂದು ಮೋಸ ಮಾಡುವುದಿಲ್ಲ. ಅಲ್ಲಲ್ಲ... ಗೋವಿಂದುವಿಗೇ ಶೀಲಾ ಮೋಸ ಮಾಡುತ್ತಾಳೆ. ಯಾಕೆಂದರೆ ಶೀಲಾಳನ್ನು ನಿಜಕ್ಕೂ ಗೋವಿಂದು ಪ್ರೀತಿ ಮಾಡುತ್ತಿರುತ್ತಾನೆ. ಅವಕಾಶವಾದಿಯಾಗಿದ್ದ ಗೋವಿಂದು ಆತ್ಮಹತ್ಯೆಯ ದಾರಿ ಹಿಡಿಯಲು ಕಾರಣ ಅದೇ.
ಕಥೆ ಮೂರನೇ ಹುಡುಗಿಯನ್ನು ದಾಟುತ್ತಿದ್ದಂತೆ ಗೋವಿಂದು ಪ್ರಜ್ಞೆ ತಪ್ಪುತ್ತಾನೆ. ವಿಷ ಸೇವಿಸಿದ್ದಾನೆ ಎಂದು ಕಾರ್ತಿಕ್ಗೆ ಗೊತ್ತಾಗುವುದು ಆಗಲೇ. ಆಸ್ಪತ್ರೆಯಲ್ಲಿ ಮತ್ತೆ ಪ್ರೇಮಕಥೆ ಶುರು. ಪ್ರೇಮಕಥೆಯೊಂದಿಗೆ ಪ್ರೀತಿಯೂ ಶುರುವಾಗುತ್ತದೆ. ಆದರೆ ಅಂತ್ಯ ಏನು?
SUJENDRA
ಕಥೆಯನ್ನು ಸಮರ್ಪಕವಾಗಿ ದೃಶ್ಯರೂಪಕ್ಕೆ ಇಳಿಸುತ್ತಿದ್ದರೆ, ನಿಜಕ್ಕೂ ಒಳ್ಳೆಯ ಸಿನಿಮಾ ಪವನ್ ಒಡೆಯರ್ ಮೂಸೆಯಿಂದ ಬರುತ್ತಿತ್ತು. ಆದರೆ ಅವರದ್ದು ಪಾತ್ರಪೋಷಣೆ, ಅಭಿರುಚಿ, ಸಂಭಾಷಣೆ, ನಿರ್ದೇಶನದ ಎಬಿಸಿಡಿ ಸಮಸ್ಯೆ. ಯಾವುದನ್ನೂ ನೆಟ್ಟಗೆ ಮಾಡದೆ ಬೆನ್ನು ನೋಯಿಸಿಕೊಂಡಿದ್ದಾರೆ.
ಯಾವ ಮಾತಿಗೂ ಸೈ ಎಂದು ಕೊಚ್ಚೆಗಿಂತಲೂ ಕೀಳಾದ ಮಾತು ಕೋಮಲ್ಗೆ ಬೇಕಿರಲಿಲ್ಲ. ಚಿತ್ರದುದ್ದಕ್ಕೂ ಕೋಮಲ್ಗೆ ನಾಯಕನ ಪಾತ್ರ ಇದೆ ಎಂಬ ಭಾವನೆ ಬರದೇ ಇದ್ದರೂ, ನಾಯಕಿಯರ ನಡುವೆ ಅವರು ದಡೂತಿ ಅಂಕಲ್.
SUJENDRA
ನಾಯಕಿಯರಲ್ಲಿ ಪಾರುಲ್ ಯಾದವ್ ಹಾಡಿನಂತೆ ನಟನೆಯಲ್ಲೂ ಫುಲ್ ಮಾರ್ಕ್ ಪಡೆದಿದ್ದಾರೆ. ರೇಖಾ ಅಷ್ಟಕ್ಕಷ್ಟೇ. ಮಧುಲಿಕಾ ಚಂದನದ ಬೊಂಬೆ. ಅನಾ ಜಾರ್ಜ್ ವಿದೇಶಿ ಗೊಂಬೆ, ಆಡಿಸಿದಷ್ಟೇ ಆಡುತ್ತಾರೆ. ಹರೀಶ್ ರಾಜ್ ಪಾಲಿಗೆ ಬಂದದ್ದು ಪಂಚಾಮೃತ ಎಂದು ಪ್ರಾಮಾಣಿಕವಾಗಿ ಉಳಿದಿದ್ದಾರೆ.
ಇವೆಲ್ಲದರ ನಡುವೆಯೂ ಸಹ್ಯವೆನಿಸುವುದು ಗುರುಕಿರಣ್ ಸಂಗೀತ. ಒಂದು ಹಾಡು ಈಗಾಗಲೇ ಚಿಂದಿ ಉಡಾಯಿಸಿದೆ. ಇನ್ನೆರಡು ಹಾಡುಗಳು ಕಿವಿ ತುಂಬುತ್ತವೆ.