ಡೈರೆಕ್ಟರ್ಸ್ ಸ್ಪೆಷಲ್: ಪ್ರೇಕ್ಷಕರಿಗೆ ಇದು ಒರಿಜಿನಲ್ ಚಾಯ್ಸ್!

ಭಾನುವಾರ, 2 ಜೂನ್ 2013 (11:08 IST)
PR
PR
ಚಿತ್ರ: ಡೈರೆಕ್ಟರ್ಸ್ ಸ್ಪೆಷಲ್
ತಾರಾಗಣ: ರಂಗಾಯಣ ರಘು, ಧನಂಜಯ್, ವತ್ಸಲಾ ಮೋಹನ್
ನಿರ್ದೇಶನ: ಗುರುಪ್ರಸಾದ್
ಸಂಗೀತ: ಅನೂಪ್ ಸೀಳಿನ್

ನಿರ್ದೇಶಕ ಗುರುಪ್ರಸಾದ್ ಸಿನಿಮಾ ಎಂದ ಮೇಲೆ ಆ ನಿರೀಕ್ಷೆಯೇ ಬೇರೆ ಇರುತ್ತದೆ. ಆದರೆ ಈ ಬಾರಿ ಅವರೂ ಪ್ರಚಾರದ ಗುಂಗಿಗೆ ಬಿದ್ದಿದ್ದರು. ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸುವ ಯತ್ನ ಮಾಡಿದ್ದರು. ಆ ಕಾರಣದಿಂದ ಕೊಂಚ ನಿರಾಸೆ ಕಟ್ಟಿಟ್ಟ ಬುತ್ತಿ. ಆದರೆ ಒಂದಂತೂ ನಿಜ, ಇದು ಕನ್ನಡದ ಇನ್ನೊಂದು ಮಾಮೂಲಿ ಸಿನಿಮಾ ಅಲ್ಲವೇ ಅಲ್ಲ.

ಗುರುಪ್ರಸಾದ್ ಈ ಹಿಂದಿನ ತನ್ನ ಟ್ರೆಂಡ್ 'ಡೈರೆಕ್ಟರ್ಸ್ ಸ್ಪೆಷಲ್'ನಲ್ಲೂ ಮುಂದುವರಿಸಿದ್ದಾರೆ. ಅದನ್ನೇ ನೆನಪಿಸುತ್ತಾರೆ ಕೂಡ. ಅದರಿಂದ ಹೊರಬರಲು ಯತ್ನಿಸಿರುವುದು ರಾಚುತ್ತದೆ. ಆದರೆ ಸಾಧ್ಯವಾಗಿಲ್ಲ. ಎಂದಿನಂತೆ ಮಾತನ್ನೇ ಬಂಡವಾಳ ಮಾಡಿಕೊಳ್ಳಲಾಗಿದೆ. ಆದರೆ ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಸಹ್ಯವೆನಿಸುತ್ತವೆ. ಮುಜುಗರಕ್ಕಿಂತಲೂ ನಗುವನ್ನೇ ಹೆಚ್ಚು ಉಕ್ಕಿಸುತ್ತವೆ.

ಸ್ಯಾಂಡಲ್‌ವುಡ್ ಮಂದಿಯ ಬಗ್ಗೆ ಸಾಕಷ್ಟು ಮಾತುಗಳಿವೆ ಎಂಬ ಪುಕಾರಿತ್ತು. ಅದೇ ಕಾರಣದಿಂದ ಕೋಮಲ್ ಈ ಚಿತ್ರದಲ್ಲಿ ನಟಿಸಲು ಹಿಂಜರಿದರು ಎಂದೂ ಸುದ್ದಿಯಾಗಿತ್ತು. ಅದು ನಿಜವಾಗಿಲ್ಲ. ಇಡೀ ಚಿತ್ರದಲ್ಲಿ ಚಿತ್ರರಂಗದ ಬಗ್ಗೆ ಹೇಳಿಕೊಳ್ಳುವಂತಹ ಯಾವುದೇ ಗಂಭೀರ ಉಲ್ಲೇಖಗಳಿಲ್ಲ. ಎಲ್ಲೋ ಒಂದೆರಡು ಕಡೆ ಉಪೇಂದ್ರ ಮತ್ತು ಟಿ.ಎನ್. ಸೀತಾರಾಮ್ ಅವರನ್ನು ಕಿಚಾಯಿಸಿದ್ದು ಮಾತ್ರ ಕಂಡು ಬರುತ್ತದೆ.

ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ತನ್ನದೇ ಪ್ರೇಕ್ಷಕ ವಲಯವನ್ನು ಕಂಡುಕೊಂಡಿರುವ ನಿರ್ದೇಶಕರು ಅವರ ನಾಡಿಮಿಡಿತವನ್ನು ಅರಿತು, ಕಥೆ ಹೆಣೆದಿದ್ದಾರೆ, ಸಂಭಾಷಣೆ ಬರೆದಿದ್ದಾರೆ. ಅಂತವರ ನಿರೀಕ್ಷೆಗಳು ಹುಸಿಯಾಗಲಾರವು. ನೆಪಕ್ಕೊಂದು ಕಥೆಯನ್ನು ಹಿಡಿದುಕೊಂಡು, ಕೆಲವೇ ಪಾತ್ರಗಳಲ್ಲಿ ಸಂಭಾಷಣೆ ಹೇಳಿಸಿ ಸಿನಿಮಾ ಮಾಡುವ ತಂತ್ರಗಾರಿಕೆ ಅನುಸರಿಸಿ ಗೆದ್ದಿದ್ದಾರೆ. ಉಳಿದ ಸಾಮಾನ್ಯ ಪ್ರೇಕ್ಷಕರಿಗೆ ಗುರುಪ್ರಸಾದ್ ಚರ್ವಿತ ಚರ್ವಣ.

ಪ್ರಥಮಾರ್ಧ ಸೂಪರ್. ಅಷ್ಟನ್ನು ನೋಡಿಯೇ ಪ್ರೇಕ್ಷಕರು ನಿರ್ದೇಶಕರಿಗೆ ಶಹಬ್ಬಾಸ್ ಗಿರಿ ನೀಡುತ್ತಾರೆ. ಕೊಟ್ಟ ಕಾಸೂ ವಾಪಸ್ ಬಂದಿರುತ್ತದೆ. ಇಡೀ ಚಿತ್ರದಲ್ಲಿ ಎಲ್ಲೂ ಗುರುಪ್ರಸಾದ್ ನಿರೂಪನೆಯಲ್ಲಿ ಹಿಡಿತ ಕಳೆದುಕೊಂಡಿದ್ದಾರೆ ಎಂಬ ಭಾವನೆ ಬರುವುದಿಲ್ಲ. ಅವರಲ್ಲಿನ ಗೊಂದಲಗಳಿಂದ ಕೆಲವೆಡೆ ಸನ್ನಿವೇಶಗಳು ಪ್ರಶ್ನಾರ್ಥಕವೆನಿಸುತ್ತವೆ.

ಚಿತ್ರದ ನಾಯಕ ಮೌನ ಬಂಗಾರವಾಗಿ ಧನಂಜಯ್ ಗಮನ ಸೆಳೆಯುತ್ತಾರೆ. ಆದರೆ ನಿಜವಾದ ನಾಯಕನಾಗುವುದು ಪಂಚೆ ಶಾಸ್ತ್ರಿಯಾಗಿ ರಂಗಾಯಣ ರಘು. ಅವರ ಲಯಬದ್ಧ ಮಾತು, ಗಂಭೀರ ಅಭಿನಯಕ್ಕೆ ಮಾರು ಹೋಗದಿರುವುದು ಕಷ್ಟ. ಇರುವ ಕೆಲವೇ ಕೆಲವು ಪ್ರಮುಖ ಪಾತ್ರಗಳಿಗೆ ಕಲಾವಿದರ ಆಯ್ಕೆಯ ಸವಾಲನ್ನು ನಿರ್ದೇಶಕರು ಮೆಟ್ಟಿ ನಿಂತಿದ್ದಾರೆ.

ಮಹೇಂದ್ರ ಸಿಂಹ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಜತೆಗೆ ಪೂಜಾ ಗಾಂಧಿಯ ಒಂದು ಐಟಂ ಹಾಡು ಎಲ್ಲವೂ ಗುರುಪ್ರಸಾದ್ ಒರಿಜಿನಲ್ ಚಾಯ್ಸ್.

ವೆಬ್ದುನಿಯಾವನ್ನು ಓದಿ