ಸಾಮಾನ್ಯವಾಗಿ ಕನ್ನಡ ಚಿತ್ರವೊಂದು ಬಿಡುಗಡೆಯಾಗುತ್ತದೆ ಎಂದಾಗ, ಅದರ ನಿರ್ದೇಶಕರು ಯಾರು? ಯಾರೆಲ್ಲ ನಟಿಸುತ್ತಿದ್ದಾರೆ ಅನ್ನೋದನ್ನು ಬಹುತೇಕ ಮಂದಿ ಲೆಕ್ಕಾಚಾರ ಹಾಕುತ್ತಾರೆ. ಜನಪ್ರಿಯ ನಿರ್ದೇಶಕ, ನಾಯಕ, ನಾಯಕಿ ಇಲ್ಲ ಎಂದಿದ್ದರೆ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅಂತಹ ಅಗ್ನಿಪರೀಕ್ಷೆ 'ಪದೇ ಪದೇ' ಚಿತ್ರಕ್ಕೂ ಇತ್ತು. ಯಾಕೆಂದರೆ, ಇದರಲ್ಲಿ ನಟಿಸಿರುವ ಯಾರೂ ಜನಪ್ರಿಯರಲ್ಲ. ನಿರ್ದೇಶಕ, ನಿರ್ಮಾಪಕರೂ ಪರಿಚಿತರಲ್ಲ. ಹಾಗಿದ್ದೂ ಚಿತ್ರ ಗಮನ ಸೆಳೆಯುವಂತಿದೆ. ಹೊಸಬರ ಪ್ರಯತ್ನ ಮೆಚ್ಚಿಕೊಳ್ಳಲೇ ಬೇಕು ಎಂಬಂತಿದೆ.
ಇದು ಬಹುತೇಕ ಸಂಪೂರ್ಣ ಹೊಸಬರ ಚಿತ್ರ. ಇದರಿಂದ ಪ್ರಮುಖರನ್ನು ಹೊರಗಿಡುವುದಾದರೆ ಸಿಗುವುದು ನಾಯಕ ತರುಣ್ ಚಂದ್ರ ಮಾತ್ರ. ಉಳಿದಂತೆ ನಿರ್ದೇಶಕ ಪೀಣ್ಯ ನಾಗರಾಜ್, ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ಛಾಯಾಗ್ರಾಹಕ ರಮೇಶ್, ನಿರ್ಮಾಪಕ ವಿಜಯ್ ಆನಂದ್ ಕುಮಾರ್, ನಾಯಕಿಯರಾದ ಅಖಿಲಾ ಕಿಶೋರ್, ಮೃದುಲಾ ಸೇಥ್ ಎಲ್ಲರೂ ಹೊಸಬರು. ಆದರೆ ಯಾರೊಬ್ಬರೂ ನಿರಾಸೆ ಮಾಡಿಲ್ಲ. ಇಡೀ ಚಿತ್ರ ಕಲಸುಮೇಲೋಗರ ಎಂಬ ಭಾವನೆ ಬರುವುದೇ ಇಲ್ಲ.
ತ್ರಿಕೋನ ಪ್ರೇಮಕಥೆಯನ್ನು ತುಂಬಾ ನೀಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪೀಣ್ಯ ನಾಗರಾಜ್. ಸಾಮಾನ್ಯವಾಗಿ ಹೊಸಬರು ನಿರ್ದೇಶಕರೆಂದರೆ ದೂರುವ ಸಂಗತಿಗಳೇ ಜಾಸ್ತಿ ಸಿಗುತ್ತದೆ. ಆದರೆ ಇಲ್ಲಿ ನಾಗರಾಜ್ ಎಸಗಿರುವ ಪ್ರಮಾದಗಳಿಗಿಂತ ಪ್ರಶಂಸೆ ಮಾಡಬೇಕಾದ ಅಂಶಗಳೇ ಹೆಚ್ಚಿವೆ. ಅಲ್ಲಲ್ಲಿ ಚಿತ್ರ ಕುಂಟುತ್ತಾ ಸಾಗುತ್ತದೆ ಎಂಬುದನ್ನು ಬಿಟ್ಟರೆ, ನಿರೂಪನೆ ಸೂಪರ್. ಕಥೆಯಲ್ಲೂ ಭಿನ್ನತೆಯಿದೆ. ಎಲ್ಲೂ ಚಿತ್ರ ಬೋರ್ ಹೊಡೆಸುವುದಿಲ್ಲ. ಸನ್ನಿವೇಶಗಳು ಎಲ್ಲೋ ನೋಡಿದಂತಾಗುವುದಿಲ್ಲ. ಅಲ್ಲಲ್ಲಿ ಬರುವ ತಿರುವುಗಳು ಮೂಡ್ ಬದಲಾಯಿಸುತ್ತವೆ.
ಪೀಣ್ಯ ನಾಗರಾಜ್ ಚಿತ್ರಕಥೆ ಇಡೀ ಚಿತ್ರದ ಹೈಲೈಟ್. ನಾಯಕ ತರುಣ್ ಚಂದ್ರ ಇದುವರೆಗೆ ನಟಿಸಿದ ಎಲ್ಲ ಚಿತ್ರಗಳಿಗಿಂತ ಉತ್ತಮ ಅಭಿನಯ ನೀಡಿದ್ದಾರೆ. ರೊಮ್ಯಾಂಟಿಕ್ ಸನ್ನಿವೇಶ, ಡ್ಯಾನ್ಸ್ ಎಲ್ಲದರಲ್ಲೂ ಅವರು ಪರಿಪಕ್ವ. ನಾಯಕಿಯರಾದ ಅಖಿಲಾ ಕಿಶೋರ್ ಮತ್ತು ಮೃದುಲಾ ಸೇಥ್ ಇಷ್ಟವಾಗುತ್ತಾರೆ.
ಸತೀಶ್ ಆರ್ಯನ್ ಸಂಗೀತದ ಹಾಡುಗಳಲ್ಲಿ ಎಲ್ಲ ಹಾಡುಗಳು ಚೆನ್ನಾಗಿವೆ. ಅದರಲ್ಲೂ ಮೂರು ಹಾಡುಗಳಂತೂ ಸೂಪರ್. ಮನಸಾಗಿದೆಯೋ... ಹಾಡಂತೂ ಹೃದಯ ಥಂಡಿ ಮಾಡುತ್ತದೆ. ಅದಕ್ಕೆ ತಕ್ಕಂತೆ ಸುಂದರ ದೃಶ್ಯಗಳನ್ನು ಜೋಡಿಸಿರುವುದು ರಮೇಶ್ ಛಾಯಾಗ್ರಹಣ. ಇಡೀ ಚಿತ್ರ ಕಣ್ಣಿಗೆ ಹಬ್ಬವಾಗುತ್ತದೆ.
ಸದಾ ರಿಮೇಕ್ ಸಿನಿಮಾಗಳಿಂದ ಟೀಕೆಗೊಳಗಾಗಿರುವ ಕನ್ನಡ ಚಿತ್ರರಂಗಕ್ಕೆ ಪೀಣ್ಯ ನಾಗರಾಜ್ರಂತಹ ನವ ನಿರ್ದೇಶಕರು ಕೊಡುಗೆ. ಕನ್ನಡ ಸಿನಿಮಾಗಳು ಚೆನ್ನಾಗಿಲ್ಲ ಎಂದು ಯಾವತ್ತೂ ಮೂದಲಿಸುತ್ತಲೇ ಕಾಲಹರಣ ಮಾಡುವವರು 'ಪದೇ ಪದೇ' ನೋಡಿ ಅಭಿಪ್ರಾಯ ಬದಲಾಯಿಸಿಕೊಳ್ಳಿ.