ಮದುವೆ ಮನೆ ಚಿತ್ರವಿಮರ್ಶೆ; ಅಪರೂಪದ ಪ್ರೇಮಕಥೆ

ಚಿತ್ರ: ಮದುವೆ ಮನೆ
ತಾರಾಗಣ: ಗಣೇಶ್, ಶ್ರದ್ಧಾ ಆರ್ಯ, ಶರಣ್, ತಬಲ ನಾಣಿ
ನಿರ್ದೇಶನ: ಸುನಿಲ್ ಕುಮಾರ್ ಸಿಂಗ್
ಸಂಗೀತ: ಮಣಿಕಾಂತ್ ಕದ್ರಿ
SUJENDRA

ಇದ್ದೆಲ್ಲ ಭಾಷೆಗಳ ಸಿನಿಮಾಗಳು ಕನ್ನಡಕ್ಕೆ ಝೆರಾಕ್ಸ್ ಆಗುತ್ತಿವೆ ಅಂತ ನೀವೇನಾದರೂ ಬೇಸರದಲ್ಲಿದ್ದರೆ, 'ಮದುವೆ ಮನೆ'ಗೆ ಹೋಗಿ. ಖಂಡಿತಾ ನಿಮ್ಮ ಮುಖದ ಭಾವ ಬದಲಾಗಿಯೇ ಆಗುತ್ತದೆ. ಅಂತಹ ಅದ್ಭುತ ಚಿತ್ರ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್‌ನಿಂದ ಬಂದಿದೆ.

ಸಾಲು ಸಾಲು ಸೋಲುಗಳು ಮತ್ತು ಕೆಟ್ಟ ಚಿತ್ರಗಳ ಕಂದಕದಲ್ಲಿ ಸಾಗುತ್ತಿದ್ದ ಗಣೇಶ್‌ಗೆ ಇಂತಹ ಚಿತ್ರವೊಂದರ ಅಗತ್ಯವಿತ್ತು. ಆ ಅಗತ್ಯವನ್ನು ಚೊಚ್ಚಲ ನಿರ್ದೇಶನದಲ್ಲಿಯೇ ಸುನಿಲ್ ಸಾಬೀತು ಮಾಡಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ಛಾಯಾಗ್ರಹಣ ಸೇರಿದಂತೆ ಯಾವುದೇ ವಿಭಾಗದಲ್ಲಿ ದೂರದಂತಹ ಅನರ್ಘ್ಯ ರತ್ನವೊಂದನ್ನು ಬೆಳ್ಳಿತೆರೆಗೆ ಅರ್ಪಿಸಿದ್ದಾರೆ.

ಸುಮಾಳಿಗೆ (ಶ್ರದ್ಧಾ ಆರ್ಯ) ಮದುವೆ ಗೊತ್ತಾಗಿರುತ್ತದೆ. ಮದುವೆಯಾಗುವವನು ಎಸಿಪಿ ದುಷ್ಯಂತ್ (ಚಿರಂತ್). ಆದರೆ ಮದುವೆ ಮನೆಯ ಸಂಭ್ರಮದಲ್ಲಿ ಭಾಗಿಯಾಗಿದ್ದ ಸೂರಜ್ (ಗಣೇಶ್) ಅಪರೂಪದ ಅವಕಾಶವೊಂದನ್ನು ಪಡೆಯುತ್ತಾನೆ. ಅದು, ಸುಮಾಳನ್ನು ಇಲ್ಲಿಂದ ಕರೆದುಕೊಂಡು ಹೋಗು ಎಂಬ ಕಾರ್ಯಭಾರ.

ವಾಸ್ತವದಲ್ಲಿ ಸುಮಾಳನ್ನು ಸೂರಜ್ ಅಪಹರಿಸುತ್ತಾನೆ. ಇದು ಗೊತ್ತಾದಾಗ ತಡವಾಗಿರುತ್ತದೆ. ಅಪಹರಣದ ಹಿಂದಿನ ಕಾರಣಗಳು ಕೂಡ ಸಮರ್ಥನೀಯವೆನಿಸುತ್ತದೆ. ಗಣೇಶ್ ತಂಗಿಯಾಗಿ ಸ್ಫೂರ್ತಿ ಮಿಂಚಿ ಮರೆಯಾಗುತ್ತಾರೆ. ಇದು ಇಡೀ ಕಥೆಯ ಹಿಂದಿನ ಛಾಯೆ.

ಇಲ್ಲಿ ಹೇಳಿರುವುದು ಕಡಿಮೆ, ಇದಕ್ಕಿಂತ ಹೆಚ್ಚಿನ ಅಚ್ಚರಿಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ.

ಪ್ರಥಮಾರ್ಧದಲ್ಲಿ ಗಣೇಶ್-ಶ್ರದ್ಧಾ ಮುನಿಸು-ಪ್ರೀತಿ ಮುಂಗಾರು ಮಳೆಯನ್ನು ನೆನಪಿಸುತ್ತದೆ. ರೈಲಿನಲ್ಲಿ ನಡೆಯುವ ಸನ್ನಿವೇಶಗಳು, ಗಣೇಶ್ ಚೇಷ್ಟೆಗಳು ಕಚಗುಳಿ ಇಡುತ್ತವೆ. ನಿರ್ದೇಶಕರು ಕಿರುತೆರೆಯಿಂದ ಬಂದಿರುವುದರಿಂದ, ಸಾಕಷ್ಟು ತಿರುವುಗಳನ್ನು ಕೊಟ್ಟಿದ್ದಾರೆ. ಆದರೆ ಅದು ಎಲ್ಲೂ ಅನಗತ್ಯ ಅಂತ ಅನ್ನಿಸುವುದೇ ಇಲ್ಲ.

ನಿರ್ದೇಶಕರು ತನ್ನ ಮೊದಲ ಚಿತ್ರದಲ್ಲೇ ಮಾದರಿಯಾಗಿದ್ದಾರೆ. ಇನ್ನೂ ಬಾಲಿಶ ಸಿನಿಮಾಗಳನ್ನು ಮಾಡುತ್ತಿರುವ, ಪರಭಾಷಾ ಚಿತ್ರಗಳನ್ನೇ ನಂಬಿಕೊಂಡಿರುವವರು ಸುನಿಲ್ ಜತೆ ಕೆಲಸ ಮಾಡುವುದು ಒಳ್ಳೆಯದು. ಅವರಿಲ್ಲಿ ಮನರಂಜನೆ, ಬೋಧನೆ, ಪ್ರಚೋದನೆ ಯಾವುದರಲ್ಲೂ ಕಡಿಮೆಯೆನಿಸಿಲ್ಲ. ವಿಭಿನ್ನ ಪ್ರೇಮಕಥೆಯನ್ನು ವಿಶೇಷ ನಿರೂಪನೆಯೊಂದಿಗೆ ತೆರೆಗಿಳಿಸಿದ್ದಾರೆ.

ಒಬ್ಬ ಕ್ರಿಯಾಶೀಲ ನಿರ್ದೇಶಕನೊಂದಿಗೆ ಕೆಲಸ ಮಾಡುವ ಅದ್ಭುತ ಅವಕಾಶ ಪಡೆದುಕೊಂಡಿರುವ ಗಣೇಶ್, ಮೋಸ ಮಾಡಿಲ್ಲ. ಅವರಿಗೆ ಹೇಳಿ ಮಾಡಿಸಿದ ಪಾತ್ರವೇ ಸಿಕ್ಕಿದೆ. ಆದರೆ ನಾಯಕಿ ಶ್ರದ್ಧಾ ಆರ್ಯ ಪ್ರಯತ್ನ ಬೋರ್ ಹೊಡೆಸುತ್ತದೆ. ಅವಿನಾಶ್, ಶರಣ್, ತಬಲ ನಾಣಿ ಪೋಷಣೆ ಅತ್ಯುತ್ತಮವಾಗಿದೆ.

ಶೇಖರ್ ಚಂದ್ರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನೋಡಿಸುತ್ತಾ, ಕೇಳಿಸುತ್ತಾ ಹೋಗುತ್ತದೆ. ನಿರ್ದೇಶಕರು ಹೆಣೆದಿರುವ ತಿರುವುಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ ಸಾಗುತ್ತದೆ.

ವೆಬ್ದುನಿಯಾವನ್ನು ಓದಿ