ಬೆಂಗಳೂರು: ಕಾಸರಗೋಡಿನ ಬಗ್ಗೆ, ಕಾಸರಗೋಡಿನ ಕನ್ನಡ ಶಾಲೆಗಳ ಬಗ್ಗೆ ಇದುವರೆಗೆ ಯಾರೂ ಕನ್ನಡದಲ್ಲಿ ಸಿನಿಮಾ ಮಾಡುವ ಧೈರ್ಯ ತೋರಿಲ್ಲ. ಆದರೆ ಕರಾವಳಿಯವರೇ ಆದ ರಕ್ಷಿತ್ ಶೆಟ್ಟಿ ಗಡಿನಾಡ ಕನ್ನಡಿಗರ ಬಗ್ಗೆ ಸಿನಿಮಾ ಮಾಡಿ ಸೈ ಎನಿಸಿದ್ದಾರೆ.
ಒಂದು ಊರಿನ, ಭಾಷೆಯ ಸಮಸ್ಯೆ ಬಗ್ಗೆ ಸಿನಿಮಾ ಮಾಡಿದರೆ ಅದು ಒಂದು ಕಲಾತ್ಮಕ ಸಿನಿಮಾದ ಸರಕಾಗಬಹುದು ಎಂದು ಇಂತಹ ಸಬ್ಜೆಕ್ಟ್ ಬಗ್ಗೆ ಯಾರೂ ಸಿನಿಮಾ ಮಾಡುವ ಧೈರ್ಯ ತೋರುವುದಿಲ್ಲ. ಆದರೆ ಅಂತಹ ಒಂದು ವಿಚಾರವನ್ನಿಟ್ಟುಕೊಂಡು ಎಲ್ಲಾ ವರ್ಗವೂ ಮೆಚ್ಚುವ, ಮನರಂಜನೆ ನೀಡುವ ಸಿನಿಮಾ ಮಾಡಬಹುದು ಎಂದು ಮಾಡಿ ತೋರಿಸಿದ್ದಾರೆ ರಿಷಬ್ ಆಂಡ್ ಟೀಂ.
ಗಂಭೀರ ವಿಚಾರವನ್ನು ಹಾಸ್ಯ ರೂಪದಲ್ಲಿ, ನವಿರಾಗಿ ಜನರಿಗೆ ಮನ ಮುಟ್ಟುವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ ಸಿನಿಮಾದಲ್ಲಿ ತೋರಿಸಲಾಗಿದೆ. ಒಬ್ಬ ಕಾಸರಗೋಡಿನ ಕನ್ನಡಿಗನಿಗೆ ಮಾತ್ರ ಅಲ್ಲಿಯ ಕನ್ನಡ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂದು ತಿಳಿದಿರುತ್ತದೆ.
ಈ ಸಿನಿಮಾವನ್ನು ನೋಡುತ್ತಿದ್ದರೆ ಅರೇ.. ಇದೆಲ್ಲಾ ನಾವು ಅನುಭವಿಸಿದ ಕತೆಯೇ ಅಲ್ವಾ ಎಂದು ಇಲ್ಲಿನ ಕನ್ನಡಿಗರಿಗೆ ಅನಿಸಬಹುದು. ಹಾಗಂತ ಇದು ಒಂದು ಪ್ರದೇಶಕ್ಕೆ ಸೀಮಿತವಾದ ಸಿನಿಮಾವಲ್ಲ. ದಡ್ಡ ಪ್ರವೀಣನಂತಹ ಓದಿನಲ್ಲಿ ಹಿಂದೆ, ಬೇರೆ ವಿಚಾರಗಳಲ್ಲಿ ಮುಂದಿರುವ ಹುಡುಗರು ನಮ್ಮ ನಡುವೆಯೇ ಎಷ್ಟೋ ಜನ ಇರುತ್ತಾರೆ.
ಒಂದು ಹಳ್ಳಿ ಶಾಲೆ, ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಇರಬೇಕಾದ ಎಲ್ಲಾ ತರ್ಲೆ, ಮಜಾ ಮಸ್ತಿ, ಹುಡುಗಿಯ ಮುಂದೆ ಮಿಂಚು ಕುಡಿ ಮೀಸೆ ಪೋರನ ಹುಂಬತನ ಎಲ್ಲವೂ ಈ ಸಿನಿಮಾದಲ್ಲಿದ್ದು, ಕಿರಿಕ್ ಪಾರ್ಟಿಯ ಜ್ಯೂನಿಯರ್ ವರ್ಷನ್ ಎನ್ನುವಂತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸಿನಿಮಾ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಈ ವರ್ಷದ ಸ್ಟಾರ್ ಗಳಿಲ್ಲದ, ಬ್ಲಾಕ್ ಬ್ಲಸ್ಟರ್ ಸಿನಿಮಾವಾಗಬಹುದಾದ ಎಲ್ಲಾ ಲಕ್ಷಣಗಳೂ ಈ ಸಿನಿಮಾದಲ್ಲಿದೆ. ಒಮ್ಮೆ ನೋಡಿ ಬಂದರೆ ಮತ್ತೆ ನಮ್ಮ ಹಳ್ಳಿ ಶಾಲೆಗೆ ಹೋಗಿ ಬಂದ ಅನುಭವವಾಗುವುದು ಸುಳ್ಳಲ್ಲ. ಮತ್ತೆ ಮತ್ತೆ ಕುಟುಂಬ ಸಮೇತ ನೋಡಬಹುದಾದ ಸಿನಿಮಾವಿದು. ಹಾಡುಗಳೂ ಸೂಪರ್ ಆಗಿವೆ. ಕಾಸರಗೋಡಿನ ಸುಂದರ ದೃಶ್ಯಗಳೂ ಕಣ್ಣಿಗೆ ಕಟ್ಟುವಂತಿದೆ. ನೋಡಿ ಬನ್ನಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.