ಐಎಎಸ್ ಅಧಿಕಾರಿಯಾಗಿರುವ ತನ್ನ ಅಣ್ಣನ ಸಾವಿನ ಸುದ್ದಿಯಿಂದ ಮನೆಗೆ ಮರಳುತ್ತಾರೆ ಯೋಧ ರಾಮ್ (ಸುದೀಪ್). ಆದರೆ ಅದು ಸಹಜ ಸಾವಲ್ಲ. ಇದರ ಹಿಂದೆ ಯಾರ ಕೈವಾಡ ಇದೆ? ಸತ್ಯಮೂರ್ತಿ ಸಾವಿಗೆ ಕಾರಣ ಯಾರು? ಶತ್ರುಗಳನ್ನು ’ಹೆಬ್ಬುಲಿ’ ಹೇಗೆಲ್ಲಾ ಬೇಟೆ ಆಡುತ್ತಾ ಹೋಗುತ್ತದೆ ಎಂಬುದನ್ನು ನೀವು ತೆರೆಯ ಮೇಲೆ ನೋಡಿ ಆನಂದಿಸಬೇಕು. ಫ್ಲ್ಯಾಶ್‍ಬ್ಯಾಕ್ ಕಥಾನಕ ಪ್ರೇಕ್ಷಕರನ್ನು ಸೆಳೆದಿಡುವಲ್ಲಿ ಯಶಸ್ವಿಯಾಗಿದೆ. ಚಿತ್ರ ಎಲ್ಲೂ ಬೋರು ಹೊಡೆಸದೆ ಸಾಗುತ್ತದೆ.
ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್, ಕಣ್ಣಿಗೆ ತಂಪೆರೆಯುವ ಹಾಡುಗಳು, ಸಂದೇಶ, ರವಿಚಂದ್ರನ್ ಅಭಿನಯ, ಅಮಲಾ ಪೌಲ್ ಗ್ಲಾಮರ್ ಅಂಶಗಳು ಚಿತ್ರದ ಹೈಲೈಟ್ಸ್ ಎನ್ನಬಹುದು. ತಾಂತ್ರಿಕವಾಗಿಯೂ ಚಿತ್ರ ಅದ್ಭುತವಾಗಿದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.
ಚಿಕ್ಕಣ್ಣ ಕಾಮಿಡಿ ಟ್ರ್ಯಾಕ್ ಜತೆಗೆ ಮೂವರು ವಿಲನ್‌ಗಳ ಅಬ್ಬರ ಚಿತ್ರಕ್ಕೆ ಇನ್ನಷ್ಟು ತೂಕ ತಂದುಕೊಟ್ಟಿದೆ. ರವಿ ಕಿಶನ್, ರವಿಶಂಕರ್, ಕಬಿರ್ ದುಹಾನ್ ಸಿಂಗ್ ಅವರ ಖಳ ಪಾತ್ರಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿ ನಿಂತಿವೆ. ಒಟ್ಟಾರೆ ಸುದೀಪ್ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿಲ್ಲ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಎಲ್ಲವೂ ಹದವಾಗಿ ಬೆರೆತು ಸಿನಿಮಾಗೆ ಭದ್ರ ಬುನಾದಿ ಹಾಕಿವೆ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ.