ಇನ್ನೊಂದು 'ಆ ದಿನಗಳು' ನೆನಪಿಸುವ ಪ್ರಯತ್ನ ಯಶಸ್ವಿಯಾಗಿದೆ. ಹಿಂಸೆಯನ್ನು ವೈಭವೀಕರಿಸದೆ ಹೇಳಬೇಕಾದುದನ್ನು, ಪುಸ್ತಕದಲ್ಲಿ ಇದ್ದುದನ್ನು ಮನ ಮುಟ್ಟುವಂತೆ ಹೇಳಿ ಗೆದ್ದಿದ್ದಾರೆ ನಿರ್ದೇಶಕಿ ಸುಮನಾ ಕಿತ್ತೂರು.
ಆತ ಮುಂಬೈ ಶಾರ್ಪ್ ಶೂಟರ್ ಸೋನಾ (ಆದಿತ್ಯ). ದುಬೈ ಡಾನ್‌ಗಾಗಿ ಮುಂಬೈ ಭೂಗತಲೋಕದಲ್ಲಿ ತುಕರಾಂ ಶೆಟ್ಟಿ (ಅಚ್ಚುತ ಕುಮಾರ್) ಪರವಾಗಿ ಹೇಳಿದ ಕೆಲಸ ಚಾಚೂ ತಪ್ಪದೆ ಮಾಡಿ ಮುಗಿಸುವ ಗಂಡೆದೆಯ ಸುಪಾರಿ ಕಿಲ್ಲರ್. ಯಾರನ್ನು ಬೇಕಾದರೂ ಮುಗಿಸಲು ಹಿಂದೇಟು ಹಾಕದಂತಹ ಗಟ್ಟಿಕುಳ.
ಆದರೆ ಪ್ರೀತಿ ಆತನನ್ನು ಬದಲಿಸಲು ಯತ್ನಿಸುತ್ತದೆ. ರಶ್ಮಿ (ಆಕಾಂಕ್ಷಾ) ಬೇಕೆನಿಸುತ್ತದೆ, ಹಿಂಸೆ ಸಾಕೆನಿಸುತ್ತದೆ. ಬದಲಾವಣೆಗೆ ಯತ್ನಿಸಿದಾಗ ಭೂಗತ ಜಗತ್ತು ಬಿಡುವುದಿಲ್ಲ. ದುಬೈ ಬಾಸ್ ಆಜ್ಞೆ ನೀಡುತ್ತಾನೆ. ಸೋನಾನನ್ನು ಮುಗಿಸಬೇಕು ಎಂದು ಮುತ್ತಪ್ಪ ರೈಗೆ (ಧರ್ಮ) ಹೇಳುತ್ತಾನೆ. ಮುತ್ತಪ್ಪ ರೈ ಈ ಜವಾಬ್ದಾರಿಯನ್ನು ಶ್ರೀಧರ್ (ಅತುಲ್ ಕುಲಕರ್ಣಿ) ಹೆಗಲಿಗೆ ಹಾಕುತ್ತಾನೆ.
ಇದು ಗೊತ್ತಿದ್ದೂ ಸೋನಾ ಸಾಯಲು ಅಣಿಯಾಗುತ್ತಾನೆ. ಕೊಲ್ಲಬೇಕಿರುವವ ಯಾರೆಂದು ಗೊತ್ತಿರುತ್ತದೆ. ಇಬ್ಬರೂ ಸ್ನೇಹಿತರಾಗಿರುತ್ತಾರೆ. ಶ್ರೀಧರ್ ಕೈಯಲ್ಲಿ ಪಿಸ್ತೂಲು ಇರುತ್ತದೆ. ಎದುರಿನಲ್ಲಿ ಸೋನಾ ಇರುತ್ತಾನೆ. ಗುಂಡು ಸಿಡಿಯುತ್ತದೆ. ಟ್ರಿಗ್ಗರ್ ಎಳೆದದ್ದು ಮಾತ್ರ ಶ್ರೀಧರ್ ಅಲ್ಲ. ಬಚ್ಚನ್ (ಸೃಜನ್ ಲೋಕೇಶ್).
ಇದು ಅಗ್ನಿ ಶ್ರೀಧರ್ ಅವರದ್ದೇ ಕಥೆ, ಅವರೇ ಬರೆದಿರುವುದು, ಅವರದ್ದೇ ಜೀವನ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಶ್ರೀಧರ್ ಅವರೇ ಬರೆದಿದ್ದಾರೆ. ಹಾಗಾಗಿ ಇಡೀ ಚಿತ್ರದ ಕೊನೆಯಲ್ಲಿ ಅಗ್ನಿ ಶ್ರೀಧರ್ ಸಮಾಜದಲ್ಲಿ ತನ್ನ ಬಗೆಗಿನ ಇಮೇಜ್ ಬದಲಾಯಿಸಲು ಯತ್ನಿಸಿರುವುದು ಸ್ಪಷ್ಟವಾಗಿಯೇ ಕಾಣುತ್ತದೆ.
ಮನರಂಜನೆಗೆ ಕಡಿಮೆ ಅವಕಾಶ ಎಂಬುದನ್ನು ಅರಿತೇ ಚಿತ್ರಮಂದಿರಕ್ಕೆ ಹೋಗುವವರಿಗೆ ಚಿತ್ರದ ಗಂಭೀರತೆ, ಮೌನ ಅಚ್ಚರಿಯೆನಿಸುವುದಿಲ್ಲ. ತುಂಬಾ ಕೂಲಾಗಿ ಸಾಗುತ್ತದೆ. ಆ ದಿನಗಳನ್ನು ಆಗಾಗ ನೆನಪಿಸುತ್ತಾ ಹೋಗುತ್ತದೆ. ಎಲ್ಲೂ ಬೋರ್ ಹೊಡೆಸುವುದಿಲ್ಲ. ಅಷ್ಟು ಚೆನ್ನಾಗಿ ನಿರೂಪಿಸಿದ್ದಾರೆ ನಿರ್ದೇಶಕಿ ಸುಮನಾ ಕಿತ್ತೂರು.
ಮೌನ ಹಲವು ಸನ್ನಿವೇಶಗಳನ್ನು ನಿಜ ಎಂದು ಸಾರುತ್ತಾ ಹೋಗುವುದು ಶಕ್ತಿಯೆನಿಸುತ್ತದೆ. ಭೂಗತ ಜಗತ್ತಿನವರ ತುಮುಲಗಳನ್ನು ಮಹಿಳಾ ನಿರ್ದೇಶಕಿಯೊಬ್ಬರು ಈ ಪರಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆನ್ನುವುದು ಅಚ್ಚರಿ. ಎಂದಿನಂತೆ ಹಿಂಸೆಯನ್ನು ವೈಭವೀಕರಿಸಲಾಗಿಲ್ಲ.
ಸೋನು ಪಾತ್ರದಲ್ಲಿ ಆದಿತ್ಯರದ್ದು ಪರಕಾಯ ಪ್ರವೇಶ. ಈ ಹಿಂದೆ ಎಷ್ಟೋ ರೌಡಿ ಸಿನಿಮಾ ಮಾಡಿದರೂ, ಇದು ಕೊಂಚ ಭಿನ್ನ. ನೋಡಿದವರು ಆದಿತ್ಯರನ್ನು ಮೆಚ್ಚದಿರುವುದು ಕಷ್ಟ. ಶ್ರೀಧರ್ ಪಾತ್ರದಲ್ಲಿ ಅತುಲ್ ಕುಲಕರ್ಣಿ ಅದ್ಭುತ. ಅಚ್ಚುತಕುಮಾರ್‌ಗೆ ಆ ರೀತಿಯ ಪಾತ್ರ ಹೊಸತಲ್ಲ. ಮುತ್ತಪ್ಪ ರೈಯಾಗಿ ಧರ್ಮ ಸಹ್ಯ. ಇವರೆಲ್ಲರಿಗಿಂತ ಇನ್ನೊಂದು ಕೋನದಲ್ಲಿ ಇಷ್ಟವಾಗುತ್ತಾ ಹೋಗುತ್ತಾರೆ ನಾಯಕಿ ಆಕಾಂಕ್ಷಾ. 'ಒಲವೇ ಮಂದಾರ'ದ ಹುಡುಗಿ ತನ್ನ ಆಯ್ಕೆಗೆ ನ್ಯಾಯ ಸಲ್ಲಿಸಿದ್ದಾರೆ. ಪ್ರೇಕ್ಷಕರು ಮರುಳಾಗುತ್ತಾರೆ.
ರಾಕೇಶ್ ಕ್ಯಾಮರಾ ಕಣ್ಣುಗಳು ಮೌನಕ್ಕೆ ಸೂಕ್ತ ಸಾಕ್ಷಿಯಾಗುತ್ತವೆ. ಸಾಧು ಕೋಕಿಲಾ ಹಿನ್ನೆಲೆ ಸಂಗೀತ ಮತ್ತು ಹಾಡು ಸೂಕ್ತವೆನಿಸುತ್ತದೆ.
ಮಾಮೂಲಿ ಮಸಾಲೆ, ರೌಡಿಸಂ ಸಿನಿಮಾಗಳನ್ನು ನೋಡಿ ಸಾಕಾಗಿದ್ದವರಿಗೆ 'ಎದೆಗಾರಿಕೆ' ಇಷ್ಟವಾಗಬಹುದು.