ಚಿತ್ರ: ಕಠಾರಿ ವೀರ ಸುರಸುಂದರಾಂಗಿ ತಾರಾಗಣ: ಉಪೇಂದ್ರ, ರಮ್ಯಾ, ಅಂಬರೀಷ್, ದೊಡ್ಡಣ್ಣ ನಿರ್ದೇಶನ: ಸುರೇಶ್ ಕೃಷ್ಣ ಸಂಗೀತ: ವಿ. ಹರಿಕೃಷ್ಣ
SUJENDRA
ಥ್ರಿಲ್ಗಾಗಿ ಏನೇನೋ ಮಾಡುವ ಮಾಸ್ ಮಾನವ (ಉಪೇಂದ್ರ) ಡಾನ್ ಆಗಲು ಹೋದ ದಾರಿಯಲ್ಲೇ ಸಾಯುತ್ತಾನೆ. ಸತ್ತ ಮಾಸ್ ಮಾನವನಿಗೆ ಚಿತ್ರಗುಪ್ತನ (ದೊಡ್ಡಣ್ಣ) ಲೆಕ್ಕಾಚಾರದ ಪ್ರಕಾರ 15 ದಿನ ನರಕ, 15 ದಿನ ಸ್ವರ್ಗ. ಇದರಲ್ಲಿ ಮಾಸ್ ಮಾನವನ ಆಯ್ಕೆ ನರಕ. ಇಲ್ಲೂ ಕಾರಣ ಥ್ರಿಲ್!
ಯಮರಾಜ (ಅಂಬರೀಷ್) ಮತ್ತು ಚಿತ್ರಗುಪ್ತರಲ್ಲಿ ಭಿನ್ನಮತ ತರುವುದು ಕೂಡ ಮಾಸ್ ಮಾನವನ ಥ್ರಿಲ್. ಇಬ್ಬರ ನಡುವೆ ತಂದಿಕ್ಕಿ ಗೊಂದಲ ಸೃಷ್ಟಿಸುವ ಡಬಲ್ ನಾರದ. ಹೀಗಿದ್ದವನಿಗೆ ನರಕ ಸಾಕೆನಿಸಿ, ಸ್ವರ್ಗದಲ್ಲೇನಿದೆ ಎಂಬ ಕುತೂಹಲ. ಇದನ್ನು ತಣಿಸಲು ಚಿತ್ರಗುಪ್ತ ಸಹಾಯ ಮಾಡುತ್ತಾನೆ. ಇಂದ್ರನ ಪುತ್ರಿ ಇಂದ್ರಜಾಳನ್ನು (ರಮ್ಯಾ) ನೋಡಿದವನು ಅನುರಕ್ತನಾಗಿ ಬಿಡುತ್ತಾನೆ.
ನರಕದಿಂದ ಮಾಸ್ ಮಾನವನನ್ನು ಓಡಿಸುವುದೇ ಸೂಕ್ತ ಎಂದು ಮೋಹನ (ರಕ್ತಕಣ್ಣೀರು ಉಪೇಂದ್ರ) ಖತರನಾಕ್ ಐಡಿಯಾ ಕೊಡುತ್ತಾನೆ. ಸ್ವರ್ಗ ಸೇರುವ ಮಾನವನಿಗೆ ದೇವಕನ್ಯೆಯನ್ನು ವರಿಸುವ ಧಾವಂತ. ಅದು ಸಾಧ್ಯವಿಲ್ಲ ಎಂದಾಗ ಸಮಸ್ಯೆ ಬ್ರಹ್ಮನಲ್ಲಿಗೆ ಹೋಗುತ್ತದೆ. ಮಾಸ್ ಮಾನವ ಮತ್ತು ಇಂದ್ರಜಾ ಮದುವೆಗೆ ಬ್ರಹ್ಮ ಒಪ್ಪುತ್ತಾನಾ? ಅವರು ಎಲ್ಲಿ ಮದುವೆಯಾಗುತ್ತಾರೆ ಅನ್ನೋದು ಉಳಿದ ಕಥೆ.
'ಕಠಾರಿ ವೀರ ಸುರಸುಂದರಾಂಗಿ' ಪಕ್ಕಾ ಫ್ಯಾಂಟಸಿ ಸಿನಿಮಾ. ಇಲ್ಲಿ ಲಾಜಿಕ್ಗೆ ಅವಕಾಶವೇ ಇಲ್ಲ, ಏನಿದ್ದರೂ ಮ್ಯಾಜಿಕ್, ಮ್ಯಾಜಿಕ್, ಮ್ಯಾಜಿಕ್. ಎಲ್ಲಿ ನೋಡಿದರೂ ಅದ್ಧೂರಿ, ಶ್ರೀಮಂತ ದೃಶ್ಯವೈಭವ. 3ಡಿ ಮನರಂಜನೆಯನ್ನೇ ಗುರಿಯನ್ನಾಗಿಸಿರುವುದರಿಂದ ಉಳಿದೆಲ್ಲವೂ ನಗಣ್ಯ.
ಚಿತ್ರದ ಆರಂಭದಲ್ಲಿ ಕಣ್ರೆಪ್ಪೆ ಮಿಟುಕಿಸದಂತೆ ಹಿಡಿದಿಡುವುದು 3ಡಿ ಮ್ಯಾಜಿಕ್. ಆದರೆ ನಂತರ ಚಿತ್ರವನ್ನು ನೋಡಿಸಿಕೊಂಡು ಹೋಗುವುದು ಉಪೇಂದ್ರ. ಅವರ ಟ್ರೇಡ್ ಮಾರ್ಕ್ನ ಸಂಭಾಷಣೆಗಳು ಅಭಿಮಾನಿಗಳನ್ನು ಶಿಳ್ಳೆ ಹೊಡೆಸುತ್ತವೆ. ಬೇರೆ ಯಾರಿಂದಲೂ ಈ ಪಾತ್ರ ಪೋಷಣೆ ಸಾಧ್ಯವೇ ಇಲ್ಲ ಎಂಬಷ್ಟು ಕಿಕ್ ಕೊಡುತ್ತಾರೆ. ಅದು ಎಷ್ಟರವರೆಗೆ ಎಂದರೆ, ಚಿತ್ರಮಂದಿರದಿಂದ ಹೊರಗೆ ಬಂದ ಮೇಲೂ ಉಪ್ಪಿಯ ಮೀಟರುಗಟ್ಟಲೆ ಸಂಭಾಷಣೆಗಳು ತಲೆ ಕೊರೆಯುತ್ತವೆ.
ಪ್ರಥಮಾರ್ಧ ಚಕಚಕನೆ ತೆರೆದುಕೊಂಡು ಹೋಗಿ ಆಸಕ್ತಿ ಹುಟ್ಟಿಸುತ್ತದೆ. ಆದರೆ ಅದನ್ನೆಲ್ಲ ಮುಳುಗಿಸುವುದು ದ್ವಿತೀಯಾರ್ಧ. ಒಂದಷ್ಟು ಕತ್ತರಿ ಪ್ರಯೋಗ ಮಾಡಿರುತ್ತಿದ್ದರೆ ಪ್ರೇಕ್ಷಕರಿಗೆ ಬೋರ್ ಆಗುವುದನ್ನು ತಪ್ಪಿಸಬಹುದಿತ್ತು.
ಇನ್ನು ಸಿನಿಮಾದುದ್ದಕ್ಕೂ 3ಡಿ ಇಲ್ಲ. ಆದರೆ ಇದ್ದಷ್ಟು ಹೊತ್ತು ಹೊಸ ಅನುಭವವನ್ನು ನೀಡುತ್ತದೆ. ಮೋಡದ ನಡುವೆ ಸ್ವರ್ಗ, ಯಮರಾಜನ ಗದೆ, ಇಂದ್ರನ ಆಯುಧ, ರಮ್ಯಾ ಹೂಮಾಲೆ ಹಿಡಿದಾಗಲೆಲ್ಲ ಪ್ರೇಕ್ಷಕ ತನ್ನನ್ನು ತಾನೇ ಮರೆಯುತ್ತಾನೆ. ಇಡೀ ಚಿತ್ರ ನಿಂತಿರುವುದೇ 3ಡಿ ಮೇಲೆ ಎಂದರೂ ತಪ್ಪಲ್ಲ. 3ಡಿ ಮತ್ತು ಉಪೇಂದ್ರ ಇರದೇ ಇರುತ್ತಿದ್ದರೆ, ಈ ಸಿನಿಮಾವನ್ನು ನೋಡಲೂ ಸಾಧ್ಯವಿಲ್ಲ!
ಅಂಬರೀಷ್ ಯಮರಾಜನಾಗಿ ಗರ್ಜಿಸುತ್ತಾರೆ. ಅವರ ರಂಗಪ್ರವೇಶ ಭಾರೀ ಸದ್ದು ಮಾಡುತ್ತದೆ. ಆದರೆ ರಮ್ಯಾ ಏಕೋ ಇಂದ್ರಜಾ ಪಾತ್ರಕ್ಕೆ ಸರಿ ಹೊಂದುತ್ತಿಲ್ಲ ಎಂಬ ಭಾವನೆ ಎಲ್ಲೋ ಒಂದೆಡೆ ಭಾಸವಾಗುತ್ತದೆ. ರಮಣೀಯವಾಗಿ, ಸುಂದರವಾಗಿ, ದಂತದ ಬೊಂಬೆಯಂತೆ ಕಂಡರೂ ಯಾಂತ್ರಿಕವಾಗಿ ಬಿಡುತ್ತಾರೆ. ಇನ್ನು ದೊಡ್ಡಣ್ಣನಿಗೆ ಇಂತಹ ಪಾತ್ರ ಹೊಸತಲ್ಲ. ಶ್ರೀಧರ್ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಇನ್ನು ಹರಿಕೃಷ್ಣ ಸಂಗೀತದಲ್ಲಿ ತೀರಾ ತಾಜಾತನವಾಗಲೀ, ಕುಣಿಸುವ ಅಂಶಗಳಾಗಲೀ ಕಾಣುವುದಿಲ್ಲ. ಆದರೂ ದೃಶ್ಯವೈಭವದಲ್ಲಿ ಹಾಡುಗಳು ಹಿತವೆನಿಸುತ್ತವೆ. ಕ್ಯಾಮರಾಮ್ಯಾನ್ ಎಚ್.ಸಿ. ವೇಣು ಅವರು 3ಡಿಗಾಗಿ ಪಟ್ಟ ಶ್ರಮವನ್ನು ನೆನಪಿಸಿಕೊಂಡು ಬೆನ್ನು ತಟ್ಟಲೇಬೇಕು. ಚಿತ್ರಕ್ಕಾಗಿ 15 ಕೋಟಿ ಖರ್ಚು ಮಾಡಿದ್ದೇನೆ ಎಂದು ನಿರ್ಮಾಪಕ ಮುನಿರತ್ನ ಇನ್ನು ಪ್ರತಿಬಾರಿ ಹೇಳಬೇಕಾಗಿಲ್ಲ.
ಇಷ್ಟೆಲ್ಲ ಹೇಳಿದ ಮೇಲೆ ನಾವು ಒಬ್ಬರನ್ನು ಮರೆತೇ ಬಿಟ್ಟಿದ್ದೇವೆ. ಅದು ನಿರ್ದೇಶಕ ಸುರೇಶ್ ಕೃಷ್ಣ. ಅವರು ಇಡೀ ಚಿತ್ರದಲ್ಲಿ ಎಲ್ಲೂ ಕೆಲಸ ಮಾಡಿದ ಕುರುಹುಗಳು ಕಾಣುವುದಿಲ್ಲವಾದ್ದರಿಂದ ಮರೆತಿದ್ದೆವು. ಬಹುಶಃ ಇಡೀ ಚಿತ್ರತಂಡವೇ ಅವರನ್ನು ಮರೆತು ಬಿಟ್ಟಿದೆ!
ಕಥೆ ಮರೆತು ಸಿನಿಮಾ ನೋಡಿ, ಎಂಜಾಯ್ ಮಾಡಿ. ಆದರೆ ನೆನಪಿಡಿ, ನಿಮ್ಮ ಮೂಗಿನ ಮೇಲೆ 3ಡಿ ಕನ್ನಡವಿದ್ದರೆ ಮಾತ್ರ!