ಕೃಷ್ಣನ್ ಲವ್ ಸ್ಟೋರಿ ಎಂಬ ನವಿರು ರೊಮ್ಯಾಂಟಿಕ್ ಕಾವ್ಯ

PR
ಚಿತ್ರ- ಕೃಷ್ಣನ್ ಲವ್ ಸ್ಟೋರಿ
ನಿರ್ದೇಶನ- ಶಶಾಂಕ್
ತಾರಾಗಣ- ಅಜಯ್ ರಾವ್, ರಾಧಿಕಾ ಪಂಡಿತ್, ಉಮಾಶ್ರೀ, ಅಚ್ಯುತ ಕುಮಾರ್, ಶರಣ್, ಪ್ರದೀಪ್, ಹರ್ಷ.

ಕೃಷ್ಣನ್ ಲವ್ ಸ್ಟೋರಿ. ಹೆಸರೇ ಹೇಳುವಂತೆ ಇದೊಂದು ಲವ್ ಸ್ಟೋರಿ. ಹೀಗೆ ಹೇಳುವುದಕ್ಕಿಂತಲೂ ಇದೊಂದು ರೊಮ್ಯಾಂಟಿಕ್ ಕಾವ್ಯ ಕಥನವೆನ್ನಬಹುದೇನೋ. ಮೊಗ್ಗಿನ ಮನಸು ಎಂಬ ಯಶಸ್ವೀ ಚಿತ್ರ ನಿರ್ದೇಶಿಸಿ ಶಹಬ್ಬಾಸ್‌ಗಿರಿ ಪಡೆದಿದ್ದ ನಿರ್ದೇಶಕ ಶಶಾಂಕ್ ಈ ಚಿತ್ರದ ಮೂಲಕ ಮತ್ತೊಮ್ಮೆ ತಾವೊಬ್ಬ ಉತ್ತಮ ನಿರ್ದೇಶಕ ಎಂದು ಸಾಬೀತುಪಡಿಸಿದ್ದಾರೆ. ಸದ್ಯ ಬಂದ ಅತ್ಯುತ್ತಮ ಚಿತ್ರಗಳ ಪಟ್ಟಿಗೆ ಇದನ್ನು ಧಾರಾಳವಾಗಿ ಸೇರಿಸಬಹುದು.

ಚಿತ್ರವಿಡೀ ರಾಧಿಕಾ ಪಂಡಿತ್ ಅವರೇ ಆವರಿಸಿಕೊಳ್ಳುತ್ತಾರೆ. ಅಂತಹ ಪರಿಪಕ್ವ ಅಭಿನಯ ಅವರದ್ದು. ಹೀಗಾಗಿ ರಾಧಿಕಾ ತನ್ನ ಪ್ರತಿಯೊಂದು ಚಿತ್ರದಲ್ಲಿ ಮತ್ತಷ್ಟು ಹೆಚ್ಚು ಪ್ರಬುದ್ಧತೆಯನ್ನೂ ಬೆಳೆಸಿಕೊಂಡು ಹೋಗಿರುವುದಕ್ಕೆ ಈ ಚಿತ್ರವೇ ಸಾಕ್ಷಿಯಾಗಿ ನಿಲ್ಲುತ್ತದೆ. ಅತ್ಯುತ್ತಮ ಚಿತ್ರಕಥೆ, ಬ್ರಿಲಿಯಂಟ್ ನಿರೂಪಣೆಯೊಂದಿಗೆ ಈ ಚಿತ್ರದ ಮೂಲಕ ನಿರ್ದೇಶಕ ಶಶಾಂಕ್ ಮತ್ತೊಮ್ಮೆ ಬೆನ್ನು ತಟ್ಟಿಸಿಕೊಳ್ಳುತ್ತಾರೆ.

ಚಿತ್ರಕಥೆ ಗೀತಾ (ರಾಧಿಕಾ ಪಂಡಿತ್) ಸುತ್ತ ಸುತ್ತುತ್ತದೆ. ಗೀತಾ ಒಬ್ಬ ಬಡ ಮಧ್ಯಮ ವರ್ಗದ ಹುಡುಗಿ. ತನ್ನ ಗುರಿಗಳನ್ನೆಲ್ಲ ಬಡತನದ ಕರಿನೆರಳಲ್ಲಿ ಅದುಮಿಟ್ಟುಕೊಂಡ ಹುಡುಗಿಯೀಕೆ. ಸಮಾಜದ ಬಗ್ಗೆ ಭಯ, ಕುಡುಕ ಅಣ್ಣನ ಬಗ್ಗೆ ಹೆದರಿಕೆ ಇರುವ ಗೀತಾ ಹೀಗಿದ್ದಾಗ್ಯೂ ಕೃಷ್ಣ (ಅಜಯ್)ನ ಪ್ರೇಮದಲ್ಲಿ ಬೀಳುತ್ತಾಳೆ. ಪರಿಸ್ಥಿತಿ, ಸಮಾಜದ ಭಯದಿಂದ ಪ್ರೇಮವನ್ನು ಅದುಮಿಟ್ಟು ಗೀತಾ ಹಣವಂತ ನರೇಂದ್ರ (ಪ್ರದೀಪ್) ಜೊತೆಗೆ ಹೋಗಬೇಕಾಗುತ್ತದೆ. ಆದರೆ ಇದರಿಂದ ಸಮಾಜವನ್ನೂ ಎದುರಿಸಲಾಗದಂತಹ ಪರಿಸ್ಥಿತಿ ತಂದೊಡ್ಡಿಕೊಳ್ಳುತ್ತಾಳೆ. ಆಕೆಯ ಆಥ್ಮಸಾಕ್ಷಿಯೇ ಇಲ್ಲಿ ಮೇಳೈಸುತ್ತದೆ. ಅಷ್ಟರಲ್ಲಿ ಕೃಷ್ಣ ಆಕೆಯ ಸಹಾಯಕ್ಕೆ ಧಾವಿಸುತ್ತಾನೆ.

ಕಥೆ ಸಾಮಾನ್ಯವೆಂಬಂತೆ ಕಂಡರೂ, ಅತ್ಯುತ್ತಮ ಬಿಗಿ ನಿರೂಪಣೆ, ಚುರುಕು ಸಂಭಾಷಣೆ, ಕಥೆಯಲ್ಲಿನ ಜೀವಂತಿಕೆ, ಅಭಿನಯ ಪ್ರತಿಭೆ, ಮನತಣಿಸುವ ಸಂಗೀತ, ಕಣ್ತಣಿಸುವ ದೃಶ್ಯಗಳು ಚಿತ್ರವನ್ನು ಅತ್ಯುತ್ತಮ ರೊಮ್ಯಾಂಟಿಕ್ ಕಾವ್ಯವಾಗಿಸಿದೆ.

ಅಜಯ್ ರಾವ್ ಅವರು ಅತ್ಯುತ್ತಮವಾಗಿಯೇ ನಟಿಸಿದ್ದಾರೆ. ಆದರೆ ರಾಧಿಕಾ ಪಂಡಿತ್ ಅವರ ಅಭಿನಯದ ಅಬ್ಬರದ ಎದುರು ಅಜಯ್ ಸಪ್ಪೆಯಾಗಿ ಕಂಡರೂ ಆಶ್ಚರ್ಯವಿಲ್ಲ. ಹರ್ಷ, ಪ್ರದೀಪ್ ನಟನೆಯಲ್ಲಿ ಮಿಂಚಿದ್ದಾರೆ. ಉಮಾಶ್ರೀ ನಟನೆ ಗಮನಾರ್ಹ. ಚಿತ್ರದ ನಿಜವಾದ ಹೀರೋ ಶ್ರೀಧರ್ ವಿ. ಸಂಭ್ರಮ್. ಅತ್ಯುತ್ತಮವಾದ ಸಂಗೀತ ನೀಡುವ ಮೂಲಕ ಚಿತ್ರಕ್ಕೆ ಕಾವ್ಯಾತ್ಮಕ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣವೂ ಚಿತ್ರ ಪ್ರಮುಖ ಹೈಲೈಟ್.

ವೆಬ್ದುನಿಯಾವನ್ನು ಓದಿ