ಚಿತ್ರ: ಜಿಂಕೆಮರಿ ತಾರಾಗಣ: ಯೋಗೇಶ್, ಸೋನಿಯಾ ಗೌಡ, ರಮೇಶ್ ಭಟ್, ಹರೀಶ್ ರಾಯ್, ಅವಿನಾಶ್, ಶರತ್ ಲೋಹಿತಾಶ್ವ ನಿರ್ದೇಶನ: ಕೆ.ಪಿ. ನವೀನ್ ಕುಮಾರ್ ಸಂಗೀತ: ಸಾಯಿ ಕಾರ್ತಿಕ್
ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂದು ಹೇಳುವಂತೆಯೂ ಇಲ್ಲ. ಕಾರಣ, ಇಲ್ಲಿ ಹೊಸತೇನೂ ಇಲ್ಲ. ಆದರೂ ಸಹ್ಯ. ಅದರಲ್ಲೂ ಯೋಗೇಶ್ ಅಭಿಮಾನಿಗಳಿಗೆ ಅವರ ರೆಡಿಮೇಡ್ ಶೈಲಿಯನ್ನು ಬಿಟ್ಟು ಹೊರಗೆ ಬಂದಿರುವ ಪ್ರಯತ್ನ ಮಾಡಿರುವುದು ಖುಷಿ ಕೊಡಬಹುದು.
ಹೇಳಿ ಕೇಳಿ 'ಜಿಂಕೆಮರಿ' ತೆಲುಗಿನ ಬಿಂದಾಸ್ ರಿಮೇಕ್. ಹೆಚ್ಚು ಕಡಿಮೆ ಮೂಲ ಚಿತ್ರಕ್ಕೆ ನಿಷ್ಠರಾಗಿರುವ ನಿರ್ದೇಶಕ ಕೆ.ಪಿ. ನವೀನ್ ಕುಮಾರ್, ಚಿತ್ರದ ನಾಯಕನ ಹೆಸರನ್ನೂ ಬದಲಾವಣೆ ಮಾಡುವ ಗೋಜಿಗೆ ಹೋಗಿಲ್ಲ. ಯಾವುದೇ ರಿಸ್ಕ್ ಬೇಡವೆಂದು ಸುರಕ್ಷಿತ ದಾರಿಯಲ್ಲೇ ಚಿತ್ರದುದ್ದಕ್ಕೂ ಸಾಗಿದಂತೆ ಕಾಣುತ್ತಾರೆ.
ಎರಡು ಕುಟುಂಬಗಳ ನಡುವಿನ ದ್ವೇಷದಲ್ಲಿ ನಾಯಕ ಸ್ನೇಹದ ಕೊಂಡಿಯಾಗುವುದು ಚಿತ್ರದ ಕಥೆ. ಇನ್ನೊಂದು ಕುಟುಂಬದಲ್ಲಿ ಸಂಶಯವೇ ಬರದ ರೀತಿಯಲ್ಲಿ ನಾಯಕ ಅವರ ಮನಸ್ಸು ಗೆಲ್ಲುತ್ತಾನೆ. ಇಷ್ಟು ಹೇಳಿದ ಮೇಲೆ ಒಬ್ಬಳು ಹುಡುಗಿ ಸಿಗುತ್ತಾಳೆ, ಪ್ರಕರಣ ಸುಖಾಂತ್ಯವಾಗುತ್ತದೆ ಎಂಬುದನ್ನು ಹೇಳಲೇಬೇಕಿಲ್ಲ, ಯಾರಾದರೂ ಊಹಿಸುತ್ತಾರೆ.
ಹೊಸತೇನೂ ಇಲ್ಲದೆಯೂ ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತದೆ. ಅದಕ್ಕೆ ಕಾರಣ, ಲವಲವಿಕೆಯ ನಿರೂಪನೆ, ಉತ್ತಮ ಹಾಡುಗಳು ಮತ್ತು ಕ್ಯಾಮರಾ ಕೆಲಸ. ಯೋಗೇಶ್ ಅಭಿಮಾನಿಗಳಿಗೆ ಯಾವುದೇ ಹಂತದಲ್ಲಿ ನಿರಾಸೆಯಾಗದ ರೀತಿಯ ಮಸಾಲೆ ಇಡೀ ಚಿತ್ರದಲ್ಲಿದೆ. ರೊಮ್ಯಾನ್ಸ್, ಆಕ್ಷನ್, ಕಾಮಿಡಿಯ ಭರಪೂರವಿದೆ.
ನಿರ್ದೇಶಕರಂತೆ ನಾಯಕ ಯೋಗೇಶ್ ಕೂಡ ಎಲ್ಲೂ ಹೆಚ್ಚು ಶ್ರಮವಹಿಸಿ ನಟಿಸಿಲ್ಲ. ಅವರದ್ದು ಉಡಾಫೆಯ ಅಭಿನಯ. ಅದರಿಂದಲೇ ಪ್ರೇಕ್ಷಕರನ್ನು ಆಕರ್ಷಿಸುವುದು ಅವರ ಶೈಲಿ. ಅದರಲ್ಲಿ ಗೆದ್ದಿದ್ದಾರೆ. ನಾಯಕಿ ಸೋನಿಯಾ ಗೌಡ ಸಿಕ್ಕಿದ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶೋಭರಾಜ್ ಮತ್ತು ಬುಲೆಟ್ ಪ್ರಕಾಶ್ ಹಾಸ್ಯ ಸನ್ನಿವೇಶಗಳು ಚಿತ್ರಮಂದಿರವನ್ನು ಕುಲುಕುತ್ತದೆ. ಶರತ್ ಲೋಹಿತಾಶ್ವ, ಅವಿನಾಶ್ ನಿಜಕ್ಕೂ ಜಿದ್ದಿಗೆ ಬಿದ್ದು ಅಬ್ಬರಿಸಿದ್ದಾರೆ. ಅಚ್ಯುತಕುಮಾರ್ ಬೇರೆಯದೇ ರೀತಿಯಲ್ಲಿ ಕಾಣುತ್ತಾರೆ.
ಸಾಯಿ ಕಾರ್ತಿಕ್ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ 'ಜಿಂಕೆಮರಿ'ಯ ಪ್ರಮುಖ ಆಸ್ತಿ. ಆರಂಭದಿಂದ ಅಂತ್ಯದವರೆಗೆ ಮನರಂಜನೆ ಇರುವುದರಿಂದ, ಯೋಗೇಶ್ ಸಾಕಷ್ಟು ಬಣ್ಣಗಳನ್ನು ತುಂಬಿರುವುದರಿಂದ ಚಿತ್ರವನ್ನು ಒಮ್ಮೆ ನೋಡಿದರೆ ಪಶ್ಚಾತ್ತಾಪವೇನೂ ಪಡಬೇಕಿಲ್ಲ.