ಡ್ರಾಮಾ ಚಿತ್ರವಿಮರ್ಶೆ: ತುಂಡು ಹೈಕಳಿಗೆ ಮೃಷ್ಟಾನ್ನ

ಸೋಮವಾರ, 26 ನವೆಂಬರ್ 2012 (14:30 IST)
PR
ಚಿತ್ರ: ಡ್ರಾಮಾ
ತಾರಾಗಣ: ಯಶ್, ರಾಧಿಕಾ ಪಂಡಿತ್, ನೀನಾಸಂ ಸತೀಶ್, ಸಿಂಧು ಲೋಕನಾಥ್, ಅಂಬರೀಷ್
ನಿರ್ದೇಶನ: ಯೋಗರಾಜ್ ಭಟ್
ಸಂಗೀತ: ವಿ. ಹರಿಕೃಷ್ಣ

ನಿರ್ದೇಶಕ ಯೋಗರಾಜ್ ಭಟ್ ಒಂದು ಅಪವಾದದಿಂದ ಹೊರಬರಲು ಯತ್ನಿಸಿರುವುದು 'ಡ್ರಾಮಾ'ದಲ್ಲಿ ಸ್ಪಷ್ಟವಾಗಿದೆ. ಅವರ ಇತ್ತೀಚಿನ ಚಿತ್ರಗಳಲ್ಲಿ ಕಥೆಯೇ ಇರುವುದಿಲ್ಲ ಎಂಬ ಟೀಕೆಯಿತ್ತು. ಈ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಗಟ್ಟಿ ಕಥೆಯಿಲ್ಲದಿದ್ದರೂ, ಪೇಲವ ಎಂದೆನಿಸುವುದಿಲ್ಲ.

ವೆಂಕಟೇಶ (ಯಶ್) ಮತ್ತು ಸತೀಶ (ನೀನಾಸಂ ಸತೀಶ್) ಪಡ್ಡೆಗಳು, ಪಕ್ಕಾ ಸೋಮಾರಿಗಳು, ಕಿರಿಕ್ ಪಾರ್ಟಿಗಳು. ಸದಾ ಯಾರನ್ನಾದರೂ ಗೋಳು ಹೋಯ್ದುಕೊಳ್ಳುವುದೇ ಕಾಯಕ ಎಂಬಂತಿರುತ್ತಾರೆ. ಆದರೆ ವೆಂಕಟೇಶನ ಜೀವನದಲ್ಲಿ ಅದೇ ರೀತಿಯ ಹುಡುಗಿ ನಂದಿನಿ (ರಾಧಿಕಾ ಪಂಡಿತ್) ಬಂದ ನಂತರ ಎಲ್ಲವೂ ಬದಲಾಗುತ್ತದೆ. ಆಕೆಯ ಸವಾಲಿಗೆ ಸೈ ಎಂದು ಹೋದವನಿಗೆ ಜೀವನ ಎನ್ನುವ ನಾಟಕದಲ್ಲಿ ತಾನೇನು ಎಂಬುದನ್ನು ಕಂಡುಕೊಳ್ಳುವುದೇ ಕಷ್ಟವಾಗುತ್ತದೆ.

ಇಡೀ ಚಿತ್ರದ ಬೆನ್ನೆಲುಬು ಯೋಗರಾಜ್ ಭಟ್ ಬರೆದಿರುವ ಚುರುಕು ಸಂಭಾಷಣೆ. ಅದೇ ಅವರ ಬಂಡವಾಳ. ತನ್ನ ಫಿಲಾಸಫಿ ಇರಲಿ, ಪೋಲಿ ಮಾತು ಇರಲಿ.. ಎಲ್ಲವನ್ನೂ ರಸವತ್ತಾಗಿ ಹೇಳುವ ಶೈಲಿಯನ್ನು ಇಲ್ಲೂ ಮುಂದುವರಿಸಿದ್ದಾರೆ. ಅವರಿಗಿರುವ ಮಂಡ್ಯ ಭಾಷೆಯ ಜ್ಞಾನ ಅಚ್ಚರಿ ಮೂಡಿಸುತ್ತದೆ. ಆ ಸೊಗಡನ್ನು ಯಶ್ ಮತ್ತು ಸತೀಶ್ ಇಬ್ಬರೂ ಮಜಬೂತಾಗಿ ಉಣಬಡಿಸಿದ್ದಾರೆ.

ಒಟ್ಟಾರೆ ಭಟ್ರು ಈ ಬಾರಿ ಕಮರ್ಷಿಯಲ್ ಸೂತ್ರಗಳಿಗೆ ಕಟ್ಟು ಬಿದ್ದಿದ್ದಾರೆ ಎಂದು ಹೇಳಲು ಅಲ್ಲಲ್ಲಿ ಸಾಕ್ಷಿ ಸಿಗುತ್ತಾ ಹೋಗುತ್ತದೆ. ಅದೇ ಕಾರಣದಿಂದಲೋ ಏನೋ, ಅವರು ಕಥೆಗೆ ಬರಲು ಹೆಣಗಾಡುತ್ತಾರೆ. ಚಿತ್ರಕಥೆ ಕೆಲವು ಕಡೆ ಕೈ ಕೊಟ್ಟಂತೆ ಕಾಣುತ್ತದೆ. ಆರಂಭದಲ್ಲಿ ಪುಟಿಯುವಂತೆ ಮಾಡಿ ಅಲ್ಲಲ್ಲಿ ಆಕಳಿಸುವ ಪರಿಸ್ಥಿತಿ ನಿರ್ಮಿಸುತ್ತಾರೆ.

ಇದುವರೆಗೆ ನಟಿಸಿದ ಚಿತ್ರಗಳಲ್ಲಿ ಯಶ್ ಪಾಲಿಗೆ ಇದೇ ಟಾಪ್. ಅವರು ಪಾತ್ರದೊಳಗೆ ತಾನಾಗಿದ್ದಾರೆ. ಮಂಡ್ಯ ಭಾಷೆಯಂತೂ ಅವರಿಗೆ ಲೀಲಾಜಾಲ. ನೀನಾಸಂ ಸತೀಶ್ ಅವರಿಗೆ ಸರಿಸಮಾನವಾಗಿ ನಿಲ್ಲಲು ಯತ್ನಿಸಿದ್ದಾರೆ. ರಾಧಿಕಾ ಪಂಡಿತ್‌ಗೆ ಪಾತ್ರ ದೊಡ್ಡ ಸವಾಲಿನದ್ದೇನಲ್ಲ. ಸಿಂಧು ಲೋಕನಾಥ್ ಮೌನಗೌರಿಯಾಗುತ್ತಾರೆ. ಸುಚೇಂದ್ರ ಪ್ರಸಾದ್ ಕನ್ನಡ ಪ್ರೀತಿ ಗಮನ ಸೆಳೆಯುತ್ತದೆ. ಅಂಬರೀಷ್ ಭವಿಷ್ಯದ ಕಿವಿಮಾತು ಸೂಕ್ತವೆನಿಸುತ್ತದೆ.

ನಿರ್ದೇಶಕರ ನಂಬುಗೆಯ ಸಂಗೀತ ನಿರ್ದೇಶಕ ಹರಿಕೃಷ್ಣ ಮತ್ತು ಛಾಯಾಗ್ರಾಹಕ ಕೃಷ್ಣ ನಿರೀಕ್ಷೆ ಹುಸಿ ಮಾಡುವುದಿಲ್ಲ.

ಎಂದಿನಂತೆ ಪ್ರೇಮದ ತೀವ್ರತೆಯಿಲ್ಲ, ಕಾಮದ ಹಸಿವಿಲ್ಲ, ಹೊಡೆದಾಟ ಇಲ್ಲವೆಂದಲ್ಲ, ಹಾಸ್ಯದ ಟಾನಿಕ್ ಅಮಲು, ಫಿಲಾಸಫಿ ಮಾಮೂಲಿ. ಟೈಮ್ ಪಾಸ್‌ಗೆ ಹೇಳಿ ಮಾಡಿಸಿದ ಸಿನಿಮಾ. ಭಟ್ಟರ ಸಿನಿಮಾವೆಂದು ನೋಡಲು ಹೋದವರಿಗೆ ಖಂಡಿತಾ ನಿರಾಸೆಯಾಗದು.

ವೆಬ್ದುನಿಯಾವನ್ನು ಓದಿ