ಪರಾರಿ ಸಿನಿಮಾ ವಿಮರ್ಶೆ; ಪೋಲಿ ಹಾಸ್ಯವೇ ಬಂಡವಾಳ!

ಶನಿವಾರ, 20 ಏಪ್ರಿಲ್ 2013 (12:40 IST)
PR
PR
ಚಿತ್ರ: ಪರಾರಿ
ತಾರಾಗಣ: ಶ್ರವಂತ್, ಶೃಂಗ, ಶುಭಾ ಪೂಂಜಾ, ಬುಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ, ಜಾಹ್ನವಿ
ನಿರ್ದೇಶನ: ಕೆ.ಎಂ. ಚೈತನ್ಯ
ಸಂಗೀತ: ಅನೂಪ್ ಸೀಳಿನ್

'ಆ ದಿನಗಳು' ಖ್ಯಾತಿಯ ಕೆ.ಎಂ. ಚೈತನ್ಯ ಪೋಲಿಯಾಗಿದ್ದಾರೆ. ಅವರು ಸ್ಪಷ್ಟವಾಗಿ ಕಾಶಿನಾಥ್ ಹಾದಿಯಲ್ಲಿ ಸಾಗುತ್ತಿದ್ದಾರೆ ಎನ್ನುವುದು 'ಪರಾರಿ'ಯಲ್ಲಿ ಸ್ಪಷ್ಟವಾಗುತ್ತದೆ.

'ಪರಾರಿ' ಎಡವಟ್ಟುಗಳ ಸಿನಿಮಾ. ಏನೋ ಮಾಡಲು ಹೋಗಿ ಇನ್ನೇನೋ ಆಗುವವರ ಕಥೆ. ಕೆಲವರಿಗೆ ಹಾಸ್ಯದ ಸಿನಿಮಾ, ಇನ್ನು ಕೆಲವರಿಗೆ ಅಪಹಾಸ್ಯದ ಸಿನಿಮಾ. ಕಾರಣ, ಇಡೀ ಚಿತ್ರವೇ ಸೆಕ್ಸ್ ಎಂಬುದನ್ನು ಆಧರಿಸಿರುವುದು. ಇಷ್ಟಾದ ಮೇಲೆ ಡಬ್ಬಲ್ ಮೀನಿಂಗ್ ಸಂಭಾಷಣೆಗಳಿಗೆ ಕೊರತೆ ಇರುವುದಿಲ್ಲ ಎಂದು ಬಿಡಿಸಿ ಹೇಳಬೇಕಿಲ್ಲ.

'ಕೈಲಾಸ ಕೈಲುಂಟು' ಎಂದೇ ಚಿತ್ರ ಆರಂಭವಾಗುತ್ತದೆ. ಯುವಕರು ಗಂಡಸರಾಗುವ ಸಲಹೆ ಪಡೆದುಕೊಂಡು ಹೋದವರು ಏನಾಗುತ್ತಾರೆ ಎಂಬುದು ಕಥೆ. ಕಾಮಾಟಿಪುರದಂತಹ ಊರು ಅವರಿಗೆ ಪ್ರಯೋಗ ಶಾಲೆ. ಇಂತಹ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣ ಪತ್ರ ನೀಡಿದೆ. ಆದರೆ ಇಡೀ ಚಿತ್ರ ಅಶ್ಲೀಲದ ಪರಮಾವಧಿ ತಲುಪಿಲ್ಲ. ಕಾಲೇಜು ಹಂತದ ಹುಡುಗರನ್ನು ಟಾರ್ಗೆಟ್ ಮಾಡಿರುವುದರಿಂದ, ನಿರ್ದೇಶಕರ ಗುರಿ ತಪ್ಪಿಲ್ಲ. ವಯಸ್ಕರಿಗೆ ನಕ್ಕು ನಲಿಯಲು ಬೇಕಾದಷ್ಟು ಸರಕು ಚಿತ್ರದಲ್ಲಿದೆ.

ನಿರ್ದೇಶಕರು ಕಥೆ ಹೇಳಲು ಹೆಚ್ಚು ಶ್ರಮ ತೆಗೆದುಕೊಂಡಿಲ್ಲ. ಬದಲಿಗೆ ತುಂಟತನ ಮೆರೆದು ಸಾಕಷ್ಟು ನಗಿಸಲು ಯತ್ನಿಸಿದ್ದಾರೆ. ನೇರವಾಗಿ ಮತ್ತು ವೇಗವಾಗಿ ಸಾಗುವ ನಿರೂಪನೆ ಇಷ್ಟವಾಗುತ್ತದೆ. ಚಕ್ಕನೆ ಬರುವ ಸಂಭಾಷಣೆಗಳು ಪ್ಲಸ್ ಪಾಯಿಂಟ್. ಒಂದು ರೀತಿಯಲ್ಲಿ ಬಾಲಿವುಡ್ ಶೈಲಿಯ ಕಾಮಿಡಿ. ಪ್ರಥಮಾರ್ಧದಷ್ಟು ದ್ವಿತೀಯಾರ್ಧ ವೇಗವಾಗಿ ಸಾಗುವುದಿಲ್ಲ. ಆದರೂ ಬೋರ್ ಆಗುವ ಪ್ರಸಂಗಗಳಿಲ್ಲ.

ಚಿತ್ರದಲ್ಲಿ ಜನಪ್ರಿಯ ನಟರಿಲ್ಲ. ಬುಲೆಟ್ ಪ್ರಕಾಶ್ ಆಸ್ತಿ. ಹೊಸಬರೇ ಆಗಿರುವ ಶ್ರವಂತ್ ಮತ್ತು ಶೃಂಗ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಶುಭಾ ಪೂಂಜಾ ಕಮ್ ಬ್ಯಾಕ್ ಚೆನ್ನಾಗಿದೆ. ಅವರಷ್ಟೇ ಗ್ಲಾಮರ್‌ನಲ್ಲಿ ಗಮನ ಸೆಳೆಯುವವರು ಇನ್ನೊಬ್ಬ ನಾಯಕಿ ಜಾಹ್ನವಿ. ನಗಿಸುವ ಖಳನಾಗಿ ಅರುಣ್ ಸಾಗರ್, ಉಮಾಶ್ರೀ, ಶರತ್ ಲೋಹಿತಾಶ್ವ, ರಂಗಾಯಣ ರಘು, ಬಿರಾದಾರ್ ಅಭಿನಯ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಇನ್ನು ಸಾಧು ಕೋಕಿಲಾ ಅವರನ್ನು ನಿರ್ದೇಶಕರು ಚೆನ್ನಾಗಿ ಬಳಸಿಕೊಂಡಿದ್ದಾರೆ. ವಿವಾದಕ್ಕೆ ಕಾರಣವಾಗಿದ್ದ ಬೀಜ ಬೀಜ ಹಾಡು ಪಡ್ಡೆಗಳಿಗೆ ಟಾನಿಕ್. ಇದರ ಸಂಗೀತ ಕರ್ತ ಅನೂಪ್ ಸೀಳಿನ್ ಇನ್ನೊಂದು ಹಾಡಿನಲ್ಲೂ ಮಿಂಚುತ್ತಾರೆ. ಛಾಯಾಗ್ರಾಹಕ ಎಚ್.ಸಿ. ವೇಣು ಅವರಿಗೆ ತ್ರಾಸ ಕಡಿಮೆ.

ಒಟ್ಟಾರೆ ಈ ಹಿಂದೆ ಚೈತನ್ಯ ಹೇಳಿಕೊಂಡಂತೆ ಇದು ಅದ್ಭುತ ಸಿನಿಮಾವಂತೂ ಅಲ್ಲ; ಆದರೆ ಮನರಂಜನೆಗೆ ಮೋಸವಿಲ್ಲ. ಚಿತ್ರಮಂದಿರದಲ್ಲಿದ್ದ ಅಷ್ಟೂ ಹೊತ್ತು ನಗುತ್ತಲೇ ಇರಬಹುದು. ಮನೆಗೆ ಬಂದ ಮೇಲೂ ನೆನಪು ಮಾಡಿಕೊಂಡು ನಗಬಹುದು. ಆದರೆ ನೆನಪಿರಲಿ, ಸಿನಿಮಾ ನೋಡಲು ಹೋಗುವಾಗ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಿ!

ವೆಬ್ದುನಿಯಾವನ್ನು ಓದಿ