ಪ್ರತಿ ಕುಟುಂಬವೂ ನೋಡಲೇಬೇಕಾದ ಪ್ರಕಾಶ್ ರೈಯ ಕನಸು

MOKSHA
ಚಿತ್ರ- ನಾನು ನನ್ನ ಕನಸು
ನಿರ್ದೇಶನ- ಪ್ರಕಾಶ್ ರೈ
ತಾರಾಗಣ- ಪ್ರಕಾಶ್ ರೈ, ಸಿತಾರಾ, ಅಮೂಲ್ಯ, ಅಚ್ಯುತ ಕುಮಾರ್, ರಾಜೇಶ್, ರಮೇಶ್ ಅರವಿಂದ್

ಪ್ರಕಾಶ್ ರೈ ಚೊಚ್ಚಲ ನಿರ್ದೇಶನದ ಬಹುನಿರೀಕ್ಷಿತ ನಾನು ನನ್ನ ಕನಸು ಚಿತ್ರ ಬಿಡುಗಡೆಯಾಗಿದೆ. ತಂದೆ ಹಾಗೂ ಮಗಳ ನಡುವಿನ ಬಾಂಧವ್ಯವನ್ನು ವಿನೂತನ ರೀತಿಯಲ್ಲಿ ತೆರೆಗೆ ತರುವಲ್ಲಿ ಪ್ರಕಾಶ್ ಸಫಲರಾಗಿದ್ದಾರೆ. ಹಾಗಾಗಿ ಇದು ಪ್ರತಿಯೊಂದು ಕುಟುಂಬವೂ ನೋಡಲೇಬೇಕಾದ ಚಿತ್ರ. ಪ್ರತಿ ಮನೆಯ ಕಥೆಯಿದು. ತುಂಬ ನೀಟಾದ ಚಿತ್ರಕಥೆ, ಅತ್ಯುತ್ತಮ ನಿರೂಪಣೆ, ಚುರುಕು ಸಂಭಾಷಣೆಯಿಂದ ಚಿತ್ರ ಗೆದ್ದಿದೆ. ಆ ಮೂಲಕ ಪ್ರಕಾಶ್ ರೈ ಕನ್ನಡದಲ್ಲಿ ತನ್ನ ಮೊದಲ ನಿರ್ದೇಶನದ ಮೂಲಕ ಭರವಸೆ ಹುಟ್ಟಿಸಿದ್ದಾರೆ.

ರಾಜ್ ಉತ್ತಪ್ಪ (ಪ್ರಕಾಶ್ ರೈ) ತನ್ನ ಹಾಗೂ ತನ್ನ ಮಗಳು ಕನಸು (ಅಮೂಲ್ಯ)ರ ನಡುವಿನ ಭಾವನಾತ್ಮಕ ಸಂಬಂಧವನ್ನು ತನ್ನ ಗೆಳೆಯ ಜಯಂತ್ (ರಮೇಶ್ ಅರವಿಂದ್‌)ಗೆ ಹೇಳುವ ಮೂಲಕ ಕಥೆ ಆರಂಭವಾಗುತ್ತದೆ. ಕನಸು ಮಗುವಾಗಿದ್ದಾಗ, ಕಿಶೋರಾವಸ್ಥೆಯಲ್ಲಿರುವಾಗ ಹದಿಹರೆಯದಲ್ಲಿದ್ದಾಗ ಹೇಗಿದ್ದಳೆಂದುಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾನೆ ಉತ್ತಪ್ಪ. ಕನಸು ಶಾಲೆಗೆ ಹೋಗುತ್ತಾಳೆ, ತನಗೆ ಸೈಕಲ್ ಬೇಕೆನ್ನುತ್ತಾಲೆ, ತನ್ನ ತರಗತಿಯ ಹುಡುಗನಿಂದ ಲವ್ ಲೆಟರ್ ಪಡೆಯುತ್ತಾಳೆ, ದೆಹಲಿಗೆ ಅಪ್ಪನನ್ನು ಒಪ್ಪಿಸಿ ಎಂಬಿಎ ಓದಲು ಹೋಗುತ್ತಾಳೆ, ಆಧರೆ ಬರುವಾಗ ಮಾತ್ರ ಜೋಗೀಂದರ್ ಸಿಂಗ್ ಎಂಬಾತನ ಪ್ರೀತಿಯ ಬಲೆಯಲ್ಲಿ ಬಿದ್ದಿರುತ್ತಾಳೆ. ಆಕೆಯ ಆಯ್ಕೆಯನ್ನು ಒಪ್ಪಲೇ ಬೇಕಾದ ಪರಿಸ್ಥಿತಿ ಅಪ್ಪನದ್ದು. ಅತ್ಯಂತ ಸಾಂಪ್ರದಾಯಿಕವಾದ ಮನಸ್ಸುಳ್ಳ ಉತ್ತಪ್ಪನದಾದರೆ, ಅವನ ಹೆಂಡತಿ ಕಲ್ಪನಾ (ಸಿತಾರಾ)ದು ಮುಂದುವರಿದ ಸ್ವಭಾವ. ಕನಸುವನ್ನು ಯಾವಾಗಲೂ ಸಪೋರ್ಟ್ ಮಾಡುವವಳು ಅಮ್ಮ.

ನಟನೆಯಲ್ಲಿ ಹೇಳುವುದಾದರೆ, ಪ್ರಕಾಶ್ ರೈ ನಟನೆಯಲ್ಲಿ ಎರಡು ಮಾತೇ ಇಲ್ಲ, ಅದ್ಭುತ. ಸಿತಾರಾ ಕೂಡಾ ಇಂಥದ್ದೇ ಪ್ರಶಂಸೆಗೆ ಪಾತ್ರರಾಗುತ್ತಾರೆ. ಅಮೂಲ್ಯ ಸಹಜವಾಗಿ ತುಂಬ ಚೆನ್ನಾಗಿ ಅಭಿನಯಿಸಿದ್ದು ಪಾತ್ರಕ್ಕೆ ಅಗತ್ಯವಾಗಿದ್ದ ನ್ಯಾಯ ಒದಗಿಸಿದ್ದಾರೆ. ಅಚ್ಯುತ ಕುಮಾರ್, ರಾಜೇಶ್, ರುತು, ಖವಲ್ಜಿತ್ ಸಿಂಗ್ ಎಲ್ಲರೂ ತಮ್ಮ ಅಭಿನಯದಲ್ಲಿ ಮೇಳೈಸುತ್ತಾರೆ. ಅನಂತ್ ಅರಸ್ ಕ್ಯಾಮರಾ ಕೈಚಳ ಸೂಪರ್ಬ್. ಹಂಸಲೇಖಾರ ಸಂಗೀತ ಕೇಳುವಂತಿದೆ.

ಅಪ್ಪನ ಮುಚ್ಚಟೆಯಲ್ಲಿ ಬೆಳೆದ ಮಗಳು ಅಪ್ಪನೆಲ್ಲವನ್ನೂ ತನ್ನದೇ ಎಂದು ಸ್ವೀಕರಿಸುವ ಮಗಳು ತನ್ನಿಚ್ಛೆಯ ಹುಡುಗನನ್ನು ಆಯ್ಕೆ ಮಾಡುವಾಗ ಅಪ್ಪನ ಮನಸ್ಸಿನ ತಲ್ಲಣದ ಚಿತ್ರಗಳನ್ನು ಪ್ರಕಾಶ್ ರೈ ಅದ್ಭುತವಾಗಿ ಬಿಡಿಸಿಟ್ಟಿದ್ದಾರೆ. ರಿಮೇಕ್ ಎಂಬ ಹಂಗು ತೊರೆದು ನೋಡಿದರೆ ಚಿತ್ರ ಅದ್ಭುತ. ಪ್ರತಿ ಮನೆಮನೆಯಲ್ಲೂ, ಪ್ರತಿಯೊಬ್ಬ ಅಪ್ಪ ಅಮ್ಮನೂ ನೋಡಬೇಕಾದ ಅತ್ಯುತ್ತಮ ಕೌಟುಂಬಿಕ ಚಿತ್ರವಿದು.

ವೆಬ್ದುನಿಯಾವನ್ನು ಓದಿ