ಕನಸುಗಳ ಚೆಲುವೆ ಕಾಜೋಲ್

ಶುಕ್ರವಾರ, 21 ನವೆಂಬರ್ 2014 (17:33 IST)
ಬಾಲಿವುಡ್ ಚಿತ್ರ ಜಗತ್ತಿನ ಇತ್ತೀಚಿನ ಶ್ರೇಷ್ಠ ನಟಿಯರಲ್ಲಿ ಒಬ್ಬರಾದ ಕಾಜೋಲ್ ಕಳೆದೆರೆಡು ದಶಕಗಳಿಂದ ಅತ್ಯುತ್ತಮ ಅಭಿನಯದಿಂದಾಗಿ ಹಿಂದಿ ಚಿತ್ರ ಜಗತ್ತಿನಲ್ಲಿ ಮನೆ ಮಾತಾಗಿದ್ದಾರೆ.
 
ಹಿಂದಿ ಚಿತ್ರರಂಗವನ್ನು ರಕ್ತಗತವಾಗಿ ಅಂಟಿಸಿಕೊಂಡು ಬಂದಿರುವ ಕಾಜೋಲ್, ಬಾಲ್ಯದಲ್ಲಿ ನಟನೆಯನ್ನು ತಮ್ಮ ತಾಯಿ ಮತ್ತು ಅಜ್ಜಿಯಿಂದ ಕಲಿತುಕೊಂಡರು.
ತಾಯಿ ತನುಜಾ (ನಟಿ), ತಂದೆ ಸೋಮು ಮುಖರ್ಜಿ (ನಿರ್ಮಾಪಕ), ಅಜ್ಜಿ ಶೋಬನಾ ಸಮರ್ಥ (ನಟಿ) ರಂತಹ ಚಿತ್ರ ನಟರ ಕುಟುಂಬದಲ್ಲಿ ಮುಂಬೈನಲ್ಲಿ 1975ರ ಅಗಸ್ಟ 5ರಂದು ಜನಿಸಿದ ಕಾಜೋಲ್ ವರಿಸಿದ್ದು ಚಿತ್ರನಟ ಅಜಯ ದೇವಗನ್ ಅವರನ್ನ.
 
1992ರಲ್ಲಿ ಕಾಜೋಲ್ 'ಬೇಕುದಿ' ಚಿತ್ರದ ಮೂಲಕ ವರ್ಣರಂಜಿತ ಜಗತ್ತಿಗೆ ಕಾಲಿರಿಸಿದರು. 'ಮೊದಲ ಚುಂಬನಂ ದಂತ ಭಗ್ನಂ' ಎನ್ನುವಂತೆ ಆರಂಭಿಕ ಚಿತ್ರದಲ್ಲಿ ಅಪಯಶಸ್ಸನ್ನು ಕಂಡ ಕಾಜೋಲ್ ಅಂದಿನಿಂದ ಇಂದಿನವರೆಗೂ ಹಲವಾರು ಏಳು ಬೀಳುಗಳನ್ನು ಎದುರಿಸುತ್ತಲೆ ಇದ್ದಾರೆ.
 
1993ರಲ್ಲಿ 'ಬಾಜಿಗರ್', 1994ರಲ್ಲಿ 'ಯೆ ದಿಲ್ಲಗಿ', 'ಉದಾರ್ ಕಿ ಜಿಂದಗಿ' ಚಿತ್ರಗಳಲ್ಲಿ ಅಭಿನಯಿಸಿದರಾದೂ ಈ ಚಿತ್ರಗಳು ಅವರಿಗೆ ಖ್ಯಾತಿಯನ್ನು ತಂದು ಕೊಡಲಿಲ್ಲ. ಆದರೆ, ಮರು ವರ್ಷ ಶಾರುಖಾನ್ ಜೊತೆ ಅಭಿನಯಿಸಿದ 'ಕರನ್-ಅರ್ಜುನ್' ಮತ್ತು 'ದಿಲ್‍‌ವಾಲೆ ದುಲ್ಹನಿಯಾ ಲೆ ಜಾಯೆಂಗೆ' ಚಿತ್ರಗಳು ಮತ್ತು ಅಜಯ್ ದೇವಗನ್ ಜೊತೆ ನಟಿಸಿದ 'ಗುಂಡಾರಾಜ್' ಮತ್ತು 'ಹಲ್‌ಚಲ್' ಚಿತ್ರಗಳು ಕಾಜೋಲ್ ಅವರ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವು.
 
1996ರಲ್ಲಿ ಯಾವುದೇ ಚಿತ್ರದಲ್ಲಿ ಅಭಿನಯಿಸಲಿಲ್ಲವಾದರೂ 1997ರಲ್ಲಿ 'ಗುಪ್ತ್' ಚಿತ್ರದ ಮೂಲಕ ಮತ್ತೆ ಯಶಸ್ಸನ್ನು ಕಂಡುಕೊಂಡ ಕಾಜೋಲ್, 'ಪ್ಯಾರ್ ತೊ ಹೋನಾ ಹಿ ತಾ', ' ಪ್ಯಾರ್ ಕಿಯಾ ತೊ ಡರನಾ ಕ್ಯಾ' ಮತ್ತು 'ದುಷ್ಮನ್' ಚಿತ್ರಗಳಲ್ಲಿ ಅಭಿನಯಿಸಿ ನಿರ್ಮಾಪಕದ ಗಲ್ಲಾ ಪೆಟ್ಟಿಗೆಯನ್ನು ತುಂಬುವಂತೆ ಮಾಡಿದರು.
 
1999ರ ಫೆಬ್ರವರಿ 24ರಂದು ಬಾಲಿವುಡ್‌ನ ಶ್ರೇಷ್ಠ ನಟ ಅಜಯ ದೇವಗನ್ ಅವರೊಂದಿಗೆ ಹಸೆಮಣೆ ಏರಿದ ಕಾಜೋಲ್, ನಂತರವೂ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ.
 
ಹೇಳಿಕೊಳ್ಳುವಂತಹ ಗ್ಲಾಮರ್ ನಟಿಯಲ್ಲದಿದ್ದರು, ಉತ್ತಮ ಅಭಿನಯದಿಂದಾಗಿ ಹತ್ತು ಹಲವು ಪ್ರತಿಷ್ಟಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, 'ದಿಲ್‍‌ವಾಲೆ ದುಲ್ಹನಿಯಾ ಲೆ ಜಾಯೆಂಗೆ', 'ಗುಪ್ತ್' ಮತ್ತು 'ಕಭಿ ಕುಷಿ ಕಭಿ ಗಮ್' ಚಿತ್ರಗಳ ಶ್ರೇಷ್ಠ ಅಭಿನಯಕ್ಕಾಗಿ ಫಿಲ್ಮಫೇರ್ ಪ್ರಶಸ್ತಿಗಳನ್ನು, 'ಝೀ ಸಿನಿ ಅವಾರ್ಡ್'ಗಳನ್ನು ಪಡೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ