ಮಾಧುರಿ ದಿಕ್ಷಿತ

ಶುಕ್ರವಾರ, 21 ನವೆಂಬರ್ 2014 (16:48 IST)
ಹಿಂದಿ ಚಿತ್ರ ಜಗತ್ತಿನ ಹಳೆಯ ಮತ್ತು ಹೊಸ ತಲೆಮಾರಿನ ಪ್ರಮುಖ ಕೊಂಡಿಯಾಗಿರುವ ಮಾಧುರಿ ದಿಕ್ಷಿತ್, ಬಾಲಿವುಡ್ ಜಗತ್ತು ಕಂಡ ಹಲವು ಶ್ರೇಷ್ಠ ನಟಿಯರಲ್ಲಿ ಒಬ್ಬರು.
 
ಮೂಲತ ಮಹಾರಾಷ್ಟ್ರದವರಾದ ಮಾಧುರಿ ಬಾಲ್ಯದಿಂದಲೂ ಚಿತ್ರ ಜಗತ್ತಿನ ಆಕರ್ಷಣೆಗೆ ಒಳಗಾಗಿದ್ದರಿಂದ ಸಹಜವಾಗಿಯೆ ಅವರು ಚಿತ್ರರಂಗವನ್ನು ಪ್ರವೇಶಿಸಿದರು.1980 ಮತ್ತು 1990ರ ದಶಕದಲ್ಲಿ ಬಾಲಿವುಡ್ ಚಿತ್ರ ಜಗತ್ತಿನ ಅಧಿನಾಯಕಿಯಾಗಿ ಮೆರೆದ ಮಾಧುರಿ ಅಭಿನಯಿಸಿದ ಮೊದಲ ಚಿತ್ರವೆಂದರೆ 1986ರಲ್ಲಿ ಬಿಡುಗಡೆಯಾದ 'ಅಬೋಧ'.
 
ಅಷ್ಟೊಂದು ಹಿಟ್ ಆಗದ ಈ ಚಿತ್ರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉತ್ತಮ ಭವಿಷ್ಯವನ್ನು ಅರಸುತ್ತಾ ಎರಡು ವರ್ಷಗಳ ಕಾಲ ಅಭಿನಯದಲ್ಲಿ ಸಾಕಷ್ಟು ಪರಿಣತಿ ಗಳಿಸಿದ ನಂತರ 1988ರಲ್ಲಿ ಬಿಡುಗಡೆಯಾದ 'ರಾಮ್ ಲಖನ್' ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಹಿಂದಿ ಚಿತ್ರ ಜಗತ್ತಿನಲ್ಲಿ ಶಾಶ್ವತವಾಗಿ ತಳವೂರಿದರು.
 
ಆಮೇಲೆ ಒಂದರ ನಂತರ ಒಂದು ಯಶಸ್ವಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಮಾಧುರಿ 1991ರಲ್ಲಿ 'ದಿಲ್' ಚಿತ್ರದ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿದರು. 'ತೇಜಾಬ್' ಚಿತ್ರದ 'ಏಕ್ ದೋ ತೀನ್' ಹಾಡಿನ ಮೂಲಕ ಭಾರತದಲ್ಲಷ್ಟೆ ಅಲ್ಲದೆ ವಿದೇಶಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಾಧುರಿ, ಶತ್ರುರಾಷ್ಟ್ರವಾದ ಪಾಕಿಸ್ತಾನದಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದರು.
 
'ಮಾಧುರಿ ದೊ ಕಾಶ್ಮೀರ್ ಲೋ' ಎನ್ನುವ ಪಾಕ್ ಉಕ್ತಿಯನ್ನು ಹುಟ್ಟಿಹಾಕುವಷ್ಟರ ಮಟ್ಟಿಗೆ ಮಾಧುರಿ ದೇಶ ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದಳು.
 
'ದಿಲ್', 'ತೇಜಾಬ್', 'ಹಮ್ ಆಪ್ ಕೆಹೈ ಕೌನ್', 'ದಿಲ್ ತೊ ಪಾಗಲ್ ಹೈ', 'ಪುಕಾರ್'ನಂತಹ ಜನಪ್ರಿಯ ಚಿತ್ರಗಳನ್ನು ನೀಡಿದ ಮಾಧುರಿಗೆ ಖ್ಯಾತ ಕಲಾವಿದ ಎಂ.ಎಫ್.ಹುಸೇನ್ ಸಹ ಕ್ಲೀನ್ ಬೌಲ್ಡ್ ಆಗಿದ್ದು ಇತಿಹಾಸ.
 
ಜನಪ್ರಿಯತೆಯ  ಉತ್ತುಂಗದಲ್ಲಿರುವಾಗಲೆ ವೈದ್ಯ ಶ್ರೀರಾಮ್ ನೆನೆಯವರನ್ನು ಮಾಧುರಿ 1999ರ ಅಕ್ಟೋಬರ್ 17ರಂದು ಮದುವೆಯಾದರು. ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಂತರವೂ ಚಿತ್ರ ಜಗತ್ತಿನ ನಂಟನ್ನು ಉಳಿಸಿಕೊಂಡು ಬಂದಿರುವ ಮಾಧುರಿ ಸಂಜಯ ಲೀಲಾ ಬನ್ಸಾಲಿಯವರ 'ದೇವದಾಸ್' ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ತಾನಿನ್ನು ಚಿರಯವ್ವನದ ಯುವತಿಯೆಂದು ಸಾಬೀತು ಪಡಿಸಿದ್ದಾಳೆ.
 
1991ರಲ್ಲಿ ದಿಲ್ ಚಿತ್ರಕ್ಕಾಗಿ, 1993ರಲ್ಲಿ ಬೇಟಾ ಚಿತ್ರಕ್ಕಾಗಿ, 1995ರಲ್ಲಿ ಹಮ್ ಆಪ್ ಕೆ ಹೈ ಕೌನ್ ಚಿತ್ರಕ್ಕಾಗಿ, 1997ರಲ್ಲಿ ದಿಲ್ ತೋ ಪಾಗಲ್ ಹೈ ಚಿತ್ರಕ್ಕಾಗಿ ಚಿತ್ರ ಜಗತ್ತಿನ ಶ್ರೇಷ್ಠ ನಟಿ ಪ್ರಶಸ್ತಿಗಳನ್ನು ಗಳಿಸಿದ ಮಾಧುರಿ ಇಗ ಪತಿ ಶ್ರೀರಾಮ್ ನೆನೆಯವರೊಂದಿಗೆ  ಅಮೆರಿಕದ ಲಾಸ್ ಏಂಜಿಲೀಸ್‌ನಲ್ಲಿ ನೆಲೆಸಿದ್ದಾರೆ.

ವೆಬ್ದುನಿಯಾವನ್ನು ಓದಿ