1,300 ಎಕರೆ ಸರಕಾರದ ವಶಕ್ಕೆ: ವೀರಾಜಪೇಟೆ ಸಿವಿಲ್ ನ್ಯಾಯಾಲಯ ಆದೇಶ
ಮಂಗಳವಾರ, 7 ಡಿಸೆಂಬರ್ 2021 (19:57 IST)
ಮಡಿಕೇರಿ: ಟಾಟಾ ಸಂಸ್ಥೆಯ ಸ್ವಾಧೀನದಲ್ಲಿದ್ದ 1,300 ತರಕಾರಿ ತೋಟವನ್ನು ಸರ್ಕಾರದ ವಶಕ್ಕೆ ನೀಡುವಂತೆ ವೀರಾಜಪೇಟೆ ಸಿವಿಲ್ ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.
ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ, ಹುದಿಕೇರಿ ಹಾಗೂ ಬಿರುನಾಣಿ ಗ್ರಾಮದ ಚಹಾ ತೋಟವು ಪ್ಟಾಟಾ ಸಂಸ್ಥೆಯ ಸ್ವಾಧೀನದಲ್ಲಿತ್ತು.
ಬ್ರಿಟೀಷ್ ಸರ್ಕಾರವು 1914-15ರಲ್ಲಿ ಈ ಗ್ರಾಮಗಳ ವ್ಯಾಪ್ತಿಯಲ್ಲಿನ ಚಹಾ ತೋಟವನ್ನು ಸಾಗುವಳಿಗಾಗಿ ಮೆಕ್ ಡೋಗಲ್ ಗ್ಲೆನ್ ಲೋರ್ನಾ ಸಂಸ್ಥೆಗೆ 999 ವರ್ಷಗಳಿಗೆ ಗುತ್ತಿಗೆಗೆ ನೀಡಿತ್ತು. ನಂತರದ ವರ್ಷಗಳಲ್ಲಿ ಈ ಅವಧಿಯನ್ನು 99 ವರ್ಷಕ್ಕೆ ಸೀಮಿತಗೊಳಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಬಾಡಿಗೆ ನಿಗದಿಪಡಿಸಲಾಗಿತ್ತು. 1928ರಲ್ಲಿ ಗ್ಲೆನ್ ಲೋರ್ನಾ ಸಂಸ್ಥೆಯು ಅನಾರ್ಕಲ್ ಟೀ ಕಂಪನಿಗೆ, ನಂತರ 1985ರಲ್ಲಿ ಈಗಿನ ಟಾಟಾ ಕಾಫಿ ಸಂಸ್ಥೆಯಾದ ಆಗಿನ ಕನ್ಸಾಲಿಡೇಟೆಡ್ ಸಂಸ್ಥೆಗೆ ಹಸ್ತಾಂತರಿಸಿತ್ತು.
ಈ ಜಾಗದ ಆರ್.ಟಿ.ಸಿಯಲ್ಲಿದ್ದ ಪೈಸಾರಿ ಎಂಬ ನಿಬಂಧನೆಯನ್ನು ಯಾವುದೇ ಆದೇಶವಿಲ್ಲದೆ ಕಾನೂನು ಬಾಹಿರವಾಗಿ ಸಾಗುವಳಿ ಎಂದು ಬದಲಾಯಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. 1914ರಲ್ಲಿ ಜಾಗವನ್ನು ಗುತ್ತಿಗೆ ಕೊಡುವಾಗ ಇದ್ದಂತೆಯೇ ಸರಿಪಡಿಸಿ, ಸರ್ಕಾರದ ವಶಕ್ಕೆ ಜಮೀನು ನೀಡುವಂತೆ ಸರ್ಕಾರವು ಹೇಳಿತ್ತು. ಜತೆಗೆ, 99 ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರಿಂದ ಜಾಗವನ್ನು ಮೀಸಲು ಅರಣ್ಯ ಎಂದು ಪರಿಗಣಿಸಲು ಅರಣ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿತ್ತು. ಈ ಸಂಬಂಧ ಟಾಟಾ ಕಂಪನಿಗೆ ನೋಟೀಸ್ ಸಹ ಜಾರಿಗೊಳಿಸಲಾಗಿತ್ತು.
ಆದರೆ, ಟಾಟಾ ಹಾಗೂ ಗ್ಲೆನ್ ಲೋರ್ನಾ ಪ್ಲಾಂಟೇಷನ್ ಸಂಸ್ಥೆಯು ಈ ಪ್ರಕ್ರಿಯೆಯ ವಿರುದ್ಧ ಅರ್ಜಿಯನ್ನು ಸಲ್ಲಿಸಿತು. ಪ್ರಕರಣವನ್ನು ವೀರಾಜಪೇಟೆಯ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಜಿ.ಲೋಕೇಶ್ ಅವರು, ಟಾಟಾ ಸಂಸ್ಥೆಯ ಅಧೀನದಲ್ಲಿರುವ ಜಮೀನನ್ನು ಸರ್ಕಾರವು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ, ಈ ಸಂಬಂಧವನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಜೊತೆಗೆ ಸಂಸ್ಥೆಯ ಅರ್ಜಿ ವಜಾಗೊಳಿಸಿದ್ದಾರೆ.
ನ್ಯಾಯಾಲಯದ ಆದೇಶದ ಪ್ರತಿ ದೊರೆತ ಕೂಡಲೇ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು' ಎಂದು ತಹಶೀಲ್ದಾರ್ ಯೋಗಾನಂದ ಅವರು ಹೇಳಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ವಕೀಲೆ ಕಂಜಿತಂಡ ಅನಿತಾ ದೇವಯ್ಯ ವಾದ ಮಂಡಿಸಿದ್ದರು.