133 ವರ್ಷ ಹಳೆಯ ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್..!

ಶನಿವಾರ, 31 ಜುಲೈ 2021 (08:25 IST)
ಕಿಚ್ಚ ಸುದೀಪ್ ಅವರು ಅಭಿನಯದ ಜೊತೆಗೆ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಕಷ್ಟು ಜನರ ಕಷ್ಟಕ್ಕೆ ನೆರವಾಗಿದ್ದಾರೆ. ಇನ್ನು ಕೊರೋನಾ ಲಾಕ್ಡೌನ್ ವೇಳೆ ಎದುರಾಗಿದ್ದ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿನಿ ರಂಗದ ಹಿರಿಯ ಕಲಾವಿದರಿಗೆ ದಿನಸಿ ಕಿಟ್ ಹಾಗೂ ಅಗತ್ಯದ ವಸ್ತುಗಳನ್ನು ನೀಡುವ ಮೂಲಕ ಅವರ ಯೋಗಕ್ಷೇಮ ವಿಚಾರಿಸಿದ್ದರು.

ಈ ಮೊದಲು ನಟ ಕಿಚ್ಚ ಸುದೀಪ್ ಮುಸ್ಲಿಂ ಯುವತಿಯ ಮದುವೆಗೆ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು.ಅದಕ್ಕೂ ಮೊದಲು ಮೈಸೂರಿನ ಹುಡುಗನೊಬ್ಬನ ಚಿಕಿತ್ಸೆಗೆ ಸ್ಪಂದಿಸಿದ್ದರು. ಆನಂತರ ತಂದೆಯಿಲ್ಲ ಮಗಳೊಬ್ಬಳ ಶಿಕ್ಷಣದ ಪೂರ್ಣ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ತೆಗೆದುಕೊಂಡಿದ್ದರು. ಇಂತಹ ನಟ ಈಗ ಮತ್ತೆ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.
ನಟ ಕಿಚ್ಚ ಸುದೀಪ್ ಸಹಾಯ ಮಾಡೋದರಲ್ಲಿ ಎತ್ತಿದ ಕೈ. ಅವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಜನರಿಗೆ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ಅನೇಕ ಉದಾಹರಣೆ ಕಣ್ಣ ಮುಂದಿವೆ. ಇದೀಗ ಅಭಿನಯ ಚಕ್ರವರ್ತಿ ಶಿವಮೊಗ್ಗ ಜಿಲ್ಲೆಯಲ್ಲಿರುವ ಸುಮಾರು 133 ವರ್ಷ ಹಳೆಯ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ.
ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ ಈ ಕನ್ನಡ ಶಾಲೆಯನ್ನು ದತ್ತು ಪಡೆಯಲಾಗಿದೆ. ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ ಇದಾಗಿದೆ. ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ದತ್ತು ಪಡೆದಿರುವ  ಸುದೀಪ್ ಅವರ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಅದರ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದೆ. ಶಾಲೆಯ ಕಟ್ಟದ ನಿರ್ಮಾಣ ಕೆಲಸ, ಪೈಟಿಂಗ್, ಶೌಚಾಲಯ ನಿರ್ಮಾಣ ಹೀಗೆ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಒದಗಿಸಿತ್ತು. ಅದರ ಜೊತೆಗೆ ನಾಲ್ಕೂ ಶಾಲೆಗಳಿಗೆ ಕಂಪ್ಯೂಟರ್ ನೀಡಲು ಮುಂದಾಗಿದೆ.
ಆ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಕೆಲಸವನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ. ಇನ್ನು ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮಾರ್ಚ್ ತಿಂಗಳಿನಲ್ಲಿ ಶಾಲೆಗಳನ್ನು ದತ್ತು ಪಡೆದುಕೊಳ್ಳುವ ಪ್ಲಾನ್ ಹಾಕಿಕೊಂಡಿತ್ತು. ಆದರೆ ಕೊರೋನಾದಿಂದಾಗಿ ಪ್ಲಾನ್ ಉಲ್ಟಾ ಹೊಡೆಯಿತು. ನಂತರ ಆಗಸ್ಟ್ ತಿಂಗಳಿನಿಂದ ಶಾಲೆಗಳು ತೆರೆಯಲಿದೆ ಎಂಬ ಸುದ್ದಿ ಕೇಳಿಬಂದಿದೆ. ಹಾಗಾಗಿ ಜುಲೈ ತಿಂಗಳಿನಲ್ಲಿ ಈ ನಾಲ್ಕು ಶಾಲೆಗಳನ್ನು ದತ್ತು ಪಡೆಯುವ ಮೂಲಕ ಅದರ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಸುದೀಪ್ ಅವರ ಸಿನಿಮಾ ವಿಷಯಕ್ಕೆ ಬಂದರೆ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಚಿತ್ರಗಳು ತೆರೆ ಕಾಣಲು ಸಜ್ಜಾಗಿವೆ. ಚಿತ್ರೀಕರಣ ಮುಗಿಸಿರುವ ತಂಡಗಳು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ