16 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ತೀವ್ರಗೊಂಡ ರೈತರ ಪ್ರತಿಭಟನೆ ಕಾವು

ಬುಧವಾರ, 7 ಸೆಪ್ಟಂಬರ್ 2016 (10:21 IST)
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದಕ್ಕೆ ರೈತರ ವಿರೋಧದ ನಡುವೆಯೂ ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ಕರ್ನಾಟಕ ಸರ್ಕಾರ  ಕೆಆರ್‌ಎಸ್‌ನಿಂದ 11 ಸಾವಿರ ಕ್ಯೂಸೆಕ್ ನೀರು ಮತ್ತು ಕಬಿನಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ಸೇರಿ ಒಟ್ಟು  16 ಸಾವಿರ ಕ್ಯೂಸೆಕ್ ನೀರನ್ನು  ಬಿಡುಗಡೆ ಮಾಡಿದೆ.

ಹಾರಂಗಿ ಜಲಾಶಯಿಂದ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು ಅದು ಕೆಆರ್‌ಎಸ್‌ಗೆ ಸೇರುತ್ತದೆ. ಇದರಿಂದಾಗಿ ರೈತರ ಪ್ರತಿಭಟನೆಯ ಕಾವು ಮತ್ತಷ್ಟು ತೀವ್ರಗೊಂಡಿದ್ದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ಮೈಸೂರು ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು.

ಎಬಿವಿಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಈ ನಡುವೆ ಬಸ್‌ಗಳಿಗೆ ಜನರು ಕಲ್ಲು ತೂರಿದ್ದರಿಂದ ತಮಿಳುನಾಡಿನಿಂದ ಬೆಂಗಳೂರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಸ್ಯಾಟಲೈಟ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೇ ಬಿಕೋ ಅನ್ನುತ್ತಿತ್ತು.
 
ಹಾಸನ ಜಿಲ್ಲೆಯ ಗೊರೂರು ಬಳಿಯ ಹೇಮಾವತಿ ಜಲಾಶಯದಿಂದ ನದಿಗೆ 9 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜನರ ವಿರೋಧಕ್ಕೆ ಕ್ಯಾರೆ ಅನ್ನದ ಸರ್ಕಾರ ಮಧ್ಯರಾತ್ರಿಯಿಂದ ಡ್ಯಾಂ ಹೊರಹರಿವು ಹೆಚ್ಚಿದ್ದರಿಂದ ನೀರು ಬಿಡುಗಡೆ ಮಾಡಿದೆ.   ಕಬಿನಿ ಜಲಾಶಯದ ಸುತ್ತ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ