17ರ ಹುಡುಗನಲ್ಲಿ ಮಿಡಿದ 71ರ ಹೃದಯ

ಗುರುವಾರ, 29 ಸೆಪ್ಟಂಬರ್ 2016 (09:17 IST)
ಅನಾರೋಗ್ಯದಿಂದ ಬಳಲುತ್ತಿದ್ದ 71 ವರ್ಷದ ವೃದ್ಧರೊಬ್ಬರು 17 ವರ್ಷದ ಹುಡುಗನಿಗೆ ತಮ್ಮ ಹೃದಯ ದಾನ ಮಾಡುವುದರ ಮೂಲಕ ಸಾವಿನಲ್ಲಿಯೂ ಮಾನವೀಯತೆಯನ್ನು ಮೆರೆದಿದ್ದಾರೆ. 

ಮೇಘಾಲಯ ಮೂಲದ ಜಾಸನ್ ಸಂಗಮ್(17)  ಹೃದಯದ ತೊಂದರೆಯಿಂದ ನಗರದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ತುರ್ತು ಹೃದಯದ ಕಸಿ ಮಾಡಬೇಕಿತ್ತು.
 
71 ವರ್ಷದ ವೃದ್ಧರೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ಎಚ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಬದುಕುಳಿಯುವ ಸಾಧ್ಯತೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜಾಸನ್ ಸಂಗಮ್‌ಗೆ ಅವರ ಹೃದಯವನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. 
 
ಬುಧವಾರ ಸಂಜೆ ಎಚ್‌ಸಿ ಆಸ್ಪತ್ರೆಯಿಂದ ಎಮ್ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಾರಾಯಣ ಆಸ್ಪತ್ರೆಯ ಘಟಕಕ್ಕೆ ಜೀವಂತ ಹೃದಯವನ್ನು ರವಾನಿಸಿ, ಶಸ್ತ್ರಚಿಕಿತ್ಸೆ ಮೂಲಕ ಯುವಕನಿಗೆ ಜೋಡಿಸಲಾಯಿತು. 

ವೆಬ್ದುನಿಯಾವನ್ನು ಓದಿ