ನೀರು ನುಗ್ಗಿದ ಮನೆಗೆ 25,000 ರೂ. ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ

ಬುಧವಾರ, 18 ಮೇ 2022 (15:20 IST)
ಬೆಂಗಳೂರು ನಗರದಲ್ಲಿ ಭಾರಿ ಮಳೆ ಸುರಿದ ಪರಿಣಾಮ ನೀರು ನುಗ್ಗಿರುವ ಮನೆಗಳಿಗೆ 25,000 ರೂ. ಹಾಗೂ ಮೃತ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಮಳೆಯಿಂದ ಹಾನಿಗೊಳಗಾದ ಹೊಸಕೆರೆಹಳ್ಳಿ ಹಾಗೂ ರಾಜರಾಜೇಶ್ವರಿನಗರದ ಬಡಾವಣೆಗಳಿಗೆ ಬುಧವಾರ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀರು ನುಗ್ಗಿರುವ ತಗ್ಗು ಪ್ರದೇಶದ ಜನರಿಗೆ ಊಟದ ವ್ಯವಸ್ಥೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರಿನಲ್ಲಿ  ಎತ್ತರದ ಪ್ರದೇಶದಿಂದ ಮಳೆನೀರು ಹೆಚ್ಚು ಹರಿದುಬಂದಾಗ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ರಾಜಾಕಾಲುವೆಗಳ ಪಕ್ಕದಲ್ಲಿ ಮನೆಗಳು ಕಟ್ಟಿಕೊಂಡಿದ್ದಾರೆ. ಆದ್ದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ನೀರು ನುಗ್ಗಿರುವ ಮನೆಗಳಿಗೆ ನೀರು ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ರಾಜಕಾಲುವೆಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ಮಿಸಲು ನೀರು ಹೊರಗೆ ಹರಿಯುವಂತೆ ಸಂಪರ್ಕ ಕಲ್ಪಿಸಬೇಕು. ರಾಜಕಾಲುವೆಗಳಲ್ಲಿ ನೀರು ಹರಿದುಹೋಗದೇ ಒಂದೇ ಕಡೆ ನಿಲ್ಲುತ್ತಿರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ವರ್ಷದಲ್ಲಿ ಸರಾಗ ಮಳೆನೀರಿನ ಹರಿವಿಗಾಗಿ ಎಲ್ಲ ಅಡಚಣೆಗಳನ್ನು ತೆಗೆಯುವ ಕಾಮಗಾರಿಗಳಿಗೆ ಆದೇಶ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಇರುವ ಬಾಟೆಲ್‍ನೆಕ್‍ಗಳನ್ನು ತೆಗೆಯಲು ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಅವರು ಹೇಳಿದರು.
ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಕೆರೆ ಪ್ರದೇಶಗಳನ್ನು ಒತ್ತುವರಿ ಮಾಡಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ.  ಇಂತಹ ಪ್ರದೇಶಗಳಲ್ಲಿ ಬಿಬಿಎಂಪಿ ವತಿಯಿಂದ ಸೆಕಂಡರಿ ಮತ್ತು ಟರ್ಷಿಯರಿ ಕಾಲುವೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಒಂದು ವರ್ಷದೊಳಗೆ ಮಾಡಲಾಗುವುದು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ