ಜಿಂದಾಲ್ ಗೆ 3 ಸಾವಿರ ಎಕರೆ ಜಮೀನು; ಜೂ. 5 ರಿಂದ ಬಿಜೆಪಿ ಹೋರಾಟ
ಬುಧವಾರ, 29 ಮೇ 2019 (15:17 IST)
ರಾಜ್ಯದ 3000 ಎಕರೆ ಜಮೀನನ್ನು ಜಿಂದಾಲ್ ಗೆ ಪರಭಾರೆ ಮಾಡುವ ರಾಜ್ಯ ಸಚಿವ ಸಂಪುಟ ನಿರ್ಧಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿ ನಿರ್ಧಾರ ಮಾಡಿದೆ.
ಜೂನ್ 5 ರಂದು ಬಿಜೆಪಿ ಸಂಸದರು ಮತ್ತು ಶಾಸಕರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪತ್ರಕರ್ತ ವಿಶ್ವಶ್ವರಭಟ್ ಮೇಲೆ ಪ್ರಕರಣ ದಾಖಲಿಸುವ ಮೂಲಕ ರಾಜ್ಯ ಸರ್ಕಾರ ಸೇಡಿನ ರಾಜಕೀಯಕ್ಕೆ ಮುಂದಾಗಿದೆ. ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಕುಮಾರಸ್ವಾಮಿಯವರ ಈ ನಡವಳಿಕೆಯನ್ನು ಖಂಡಿಸುತ್ತೇವೆ ಎಂದರು.
ರಾಜ್ಯದ ಅಪ್ಪಮಕ್ಕಳ ಸರ್ಕಾರ ಸತ್ತು ಹೋಗಿದೆ. ಬರ ಪರಿಸ್ಥಿತಿ ಇದ್ದರೂ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಜೆಡಿಎಸ್ ಅಪ್ಪಮಕ್ಕಳ ಪಾರ್ಟಿ. ಕಾಂಗ್ರೆಸ್ ನ್ನು ಸರ್ವನಾಶ ಮಾಡಿದೆ. ಹೇಗಾದರೂ ಮಾಡಿ ಅಧಿಕಾರದಲ್ಲಿ ಮುಂದುವರಿಯುವ ಷಡ್ಯಂತ್ರ ಮಾಡಿದ್ದಾರೆ. 22 ಸ್ಥಾನ ಗೆಲ್ಲೋದು ನಮ್ಮ ಗುರಿ ಎಂದು ಹೇಳಿದ್ದೆ. ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಜನ ಆಶೀರ್ವಾದ ಮಾಡಿದ್ದಾರೆ. ಅದನ್ನು ಪ್ರಧಾನಿ ಮೋದಿಯವರೇ ಪ್ರಶಂಸಿದ್ದಾರೆ ಎಂದರು.