ಐಪಿಎಲ್‌ ಶಾಸಕರಿಗೆ ತಲಾ 5ಟಿಕೆಟ್‌, ಇದಕ್ಕೆ ನನ್ನ ಬೆಂಬಲವಿಲ್ಲ

Sampriya

ಶುಕ್ರವಾರ, 27 ಮಾರ್ಚ್ 2026 (17:43 IST)
ಬೆಂಗಳೂರು: ಐಪಿಎಲ್ ಕ್ರಿಕೆಟ್‌ ನೋಡಲು ಶಾಸಕರಿಗೆ ತಲಾ ಐದು ಟಿಕೆಟ್ ನೀಡಬೇಕೆನ್ನುವುದಕ್ಕೆ ನನ್ನ ಬೆಂಬಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. 

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಕಾಂಗ್ರೆಸ್‌ನ ಕೆಲವು ಸದಸ್ಯರು ಶಾಸಕರಿಗೆ ತಲಾ 5 ಟಿಕೆಟ್‌ ನೀಡಬೇಕು, ಪಂದ್ಯ ವೀಕ್ಷಣೆಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಒತ್ತಾಯಿಸಿದ್ದರು. ಇದಕ್ಕೆ ಸಭಾಧ್ಯಕ್ಷ ಯುಟಿ ಖಾದರ್ ಕೂಡಾ ಬಲವಾಗಿ ಪ್ರತಿಪಾದಿಸಿದ್ದರು. 

ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಒಬ್ಬ ಶಾಸಕ, ಜನಪ್ರತಿನಿಧಿ ಜನ ಸಾಮಾನ್ಯರಿಗಿಂತ ವಿಭಿನ್ನ, ವಿಐಪಿ ಎಂಬುದು ಖಂಡಿತಾ ಒಳ್ಳೆಯ ಬೆಳವಣಿಗೆ ಅಲ್ಲ. ಇದಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದರು. 

ಸದನದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷ ಶಾಸಕರ ಹೇಳಿಕೆಯನ್ನು ಗಮನಿಸಿದ್ದೇನೆ. ವೈಯಕ್ತಿಕವಾಗಿ ಅವರ ಹೇಳಿಕೆಗಳನ್ನು ಒಪ್ಪುವುದಿಲ್ಲ. ಜನಸಾಮಾನ್ಯರು ರಾಜಕಾರಣಿಗಳನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ಪತ್ರಿಕೆಗಳು ಮತ್ತು ಟಿ.ವಿಗಳಲ್ಲಿ ನೋಡುತ್ತಿದ್ದೇವೆ.

ಇನ್ನೂ ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11ಮಂದಿ ಸಾವನ್ನಪ್ಪಿದ್ದರು. ರಾಜ್ಯದ ಮತ್ತು ದೇಶದ ಜನರು ಅದನ್ನು ಮರೆತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಹೇಳಿಕೆಗಳು ಬೇಕಿತ್ತಾ, ನನಗಂತೂ ಅರ್ಥವಾಗುತ್ತಿಲ್ಲ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ