ಮಂಗಳೂರು: ಕೆಲ ದಿನಗಳಿಂದ ನಗರ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಆರು ಪ್ರಾಣಿಗಳು ಸಾವಿಗೀಡಾಗಿದ್ದು, ಇದು ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಈ ಪ್ರಾಣಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣ ಏನು ಎಂಬುದನ್ನು ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ಪ್ರಾಣಿಗಳ ವಿವರ ಹೀಗಿದೆ: ಕಳೆದ ಐದು ದಿನಗಳಲ್ಲಿ ಮಲಬಾರ್ ಜೈಂಟ್ ಅಳಿಲು, ನಾಲ್ಕು ಪುನಗು ಬೆಕ್ಕು, ಮೂಷಿಕ ಜಿಂಕೆಯ ಮರಿ ಸಾವನ್ನಪ್ಪಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ. ಅರುಣ್ ಕುಮಾರ್ ಮಲಬಾರ್ ಜೈಂಟ್ ಅಳಿಲಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 16 ವರ್ಷದ ಅಳಿಲು, ವಯೋಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ.
ಪುನಗು ಬೆಕ್ಕಿನ ಮಾದರಿಗಳನ್ನು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯಾಲಾಜಿಕಲ್ ಮತ್ತು ಬನ್ನೇರುಘಟ್ಟದ ವನ್ಯಜೀವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕ ಸಾವಿಗೆ ಸ್ಪಷ್ಟ ಕಾರಣ ತಿಳಿಯಬಹುದು ಎಂದಿದ್ದಾರೆ.