ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ಜಂಜಾಟ ಇನ್ನು ತಪ್ಪಲಿದೆ!
ಈ ವೆಬ್ಸೈಟ್ ಮೂಲಕವೇ ಭೂಮಿಯ ಮಾಲೀಕರು ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಏಳೇ ದಿನದಲ್ಲಿ ದಾಖಲೆಗಳು ಕೈ ಸೇರಲಿವೆ. ಈ ವೆಬ್ಸೈಟ್ ಆರಂಭವಾದಾಗಿನಿಂದ ರಾಜ್ಯಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಶೇ. 70ಕ್ಕಿಂತ ಹೆಚ್ಚು ವಿಲೇವಾರಿಯಾಗಿವೆ. ಈ ಮೊದಲು ನಾಡ ಕಚೇರಿಗೆ ಹೋಗಿ ಜಮೀನಿನ 11ಇ, ಪೋಡಿ ಸೇರಿ ಇತ್ಯಾದಿ ಕಾರ್ಯಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆ ಅರ್ಜಿಯು ನಾಡಕಚೇರಿಯಲ್ಲಿ ಪರಿಶೀಲನೆಗೊಳಪಟ್ಟು ಸರತಿಯಲ್ಲಿ ಬೀಳುತಿತ್ತು. ಸರತಿಯಿಂದ ಭೂಮಾಪಕರ ಬಳಿ ಹೋಗುತ್ತಿತ್ತು. ಭೂಮಾಪಕರು ಜಮೀನನ್ನು ಪರಿಶೀಲಿಸಿ, ನಕ್ಷೆ ಗುರುತಿಸಿ ಅಪ್ಲೋಡ್ ಮಾಡುತ್ತಿದ್ದರು. ಅಪ್ಲೋಡ್ ಆದ ದಾಖಲೆಯನ್ನು ತಪಾಸಕರ ಮೂಲಕ ಪರಿಶೀಲಿಸಿದ ಬಳಿಕ ಅಂತಿಮ ಅನುಮೋದನೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ ಒಂದೂವರೆ ತಿಂಗಳಿಂದ ಎರಡು ತಿಂಗಳು ಸಮಯ ಹಿಡಿಯುತ್ತಿತ್ತು. ಆದರೆ, 'ಸ್ವಾವಲಂಬಿ' ವೆಬ್ಸೈಟ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು 7 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.