ಬಿಜೆಪಿ ಬೆಂಬಲಿಸಿದ್ದ ಕೊಳ್ಳೇಗಾಲ ನಗರಸಭೆಯ 7ಮಂದಿ

ಶನಿವಾರ, 25 ಸೆಪ್ಟಂಬರ್ 2021 (21:43 IST)
ಬೆಂಗಳೂರು: ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ್ದ ಕೊಳ್ಳೇಗಾಲ ನಗರಸಭೆಯ 7ಮಂದಿ ಸದಸ್ಯರನ್ನು ಅನರ್ಹಗೊಳಿಸಿದ್ದ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ತಮ್ಮನ್ನು ನಗರಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ಜಿಲ್ಲಾಧಿಕಾರಿ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಕೊಳ್ಳೇಗಾಲ ನಗರಸಭೆ ಸದಸ್ಯರಾಗಿದ್ದ ಪವಿತ್ರ ಹಾಗೂ ಇತರೆ 6 ಮಂದಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ತೀರ್ಪು ಪ್ರಕಟಿಸಿರುವ ಹೈಕೋರ್ಟ್, ಜಿಲ್ಲಾಧಿಕಾರಿ ಆದೇಶ ಎತ್ತಿ ಹಿಡಿದಿದೆ.
ಪ್ರಕರಣದ ಹಿನ್ನೆಲೆ: 2020ರ ಅಕ್ಟೋಬರ್ 29ರಂದು ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಇದನ್ನು ಉಲ್ಲಂಘಿಸಿ ಬಿಎಸ್ಪಿಯ 7 ಮಂದಿ ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದ್ದರು. ಪಕ್ಷದ ವಿಪ್ ಉಲ್ಲಂಘಿಸಿದ್ದ ಸದಸ್ಯರನ್ನು ಹುದ್ದೆಯಿಂದ ಅನರ್ಹಗೊಳಿಸುವಂತೆ ಕೋರಿ ಬಿಎಸ್ಪಿ ನಗರಸಭೆ ಸದಸ್ಯೆ ಜಿ. ಜಯಮರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ್ದ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂಆರ್ ರವಿ ಅವರು, ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ 1987ರ ಅಡಿ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿ ಇದೇ ಸೆಪ್ಟೆಂಬರ್ 6ರಂದು ಆದೇಶಿಸಿದ್ದರು. ಜಿಲ್ಲಾಧಿಕಾರಿ ಆದೇಶದಿಂದ ನಗರಸಭೆ ಸದಸ್ಯ ಸ್ಥಾನ ಕಳೆದುಕೊಂಡ ಗಂಗಮ್ಮ, ನಾಗಮಣಿ, ನಾಗಸುಂದ್ರಮ್ಮ, ಪ್ರಕಾಶ್, ರಾಮಕೃಷ್ಣ, ನಾಸಿರ್ ಷರೀಫ್ ಹಾಗೂ ಪವಿತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ