ಪೀಠ ತನ್ನ ಆದೇಶದಲ್ಲಿ, ಅರಣ್ಯ ಇಲಾಖೆಯು ಸರ್ಕಾರದ ಹಣದಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗುಂಡೇಹಳ್ಳಿಯ ಸರ್ವೇ ನಂಬರ್ 66ರಲ್ಲಿನ 36 ಎಕರೆ 2 ಗುಂಟೆ ಗೋಮಾಳ ಜಮೀನಿನಲ್ಲಿ 1995ರಲ್ಲಿ ಒಟ್ಟು 9,500 ಗಿಡಗಳನ್ನು ನೆಟ್ಟಿತ್ತು. ನಂತರ ನಿರ್ವಹಣೆಗಾಗಿ ಬನಹಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿತ್ತು. ಆದರೆ, ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಎಲ್ಲ ಗಿಡಗಳನ್ನು ನಾಶಪಡಿಸಲಾಗಿದೆ. ಇದರಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇದೇ ವೇಳೆ, ಸರ್ಕಾರ ವ್ಯತಿರಿಕ್ತ ಹೇಳಿಕೆ ದಾಖಲಿಸಿದ್ದು, ಜಾಗದ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದು, ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಂಡಿದ್ದಾಗಿ ತಿಳಿಸಿದೆ.
ಆದ್ದರಿಂದ ಈ ಕುರಿತು ಲೋಕಾಯುಕ್ತ ತನಿಖೆ ಆದೇಶಿಸುವುದು ಸೂಕ್ತ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೇ, ಪ್ರಕರಣ ಕುರಿತು ಲೋಕಾಯುಕ್ತ ಸಂಸ್ಥೆಯು ತನಿಖೆ ನಡೆಸಬೇಕು ಹಾಗೂ ತನಿಖೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಈ ಜಾಗದಲ್ಲಿ ಅರಣ್ಯ ಇಲಾಖೆಯು ಮತ್ತೆ ಆರು ತಿಂಗಳ ಒಳಗೆ ಗಿಡಗಳನ್ನು ನೆಡಬೇಕು. ಅಕ್ರಮ ಗಣಿಗಾರಿಕೆಯಿಂದ ಮತ್ತೆ ಗಿಡಗಳನ್ನು ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ಪೀಠ ನಿರ್ದೇಶಿಸಿದೆ.