ತಾಯಿಯನ್ನು ‘ಹೆದರಿಸುವ’ ಮುದ್ದು ಪುಟಾಣಿ
ಮರೆಯಲ್ಲಿ ನಿಂತು ತಮ್ಮ ಪ್ರೀತಿಪಾತ್ರರಿಗೆ ಹೆದರಿಸುವುದು ಯಾರಿಗೂ ಹೊಸದೇನೂ ಅಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಲವಾದರೂ ಈ ರೀತಿ ಇಷ್ಟಪಾತ್ರರನ್ನು ಕಾಡಿರುತ್ತಾರೆ. ಒಮ್ಮೊಮ್ಮೆ ಮಕ್ಕಳನ್ನೂ ಕೆಲವರು ಈ ರೀತಿಯಾಗಿ ಹೆದರಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ಇಲ್ಲಿ ಮಗುವೇ ತನ್ನ ತಾಯಿಯನ್ನು ಮುದ್ದಾಗಿ ಹೆದರಿಸುತ್ತದೆ. ಈ ಕ್ಷಣವೇ ಸುಂದರ. ನೋಡಿದಷ್ಟು ಖುಷಿ ನೀಡುವ ಅದ್ಭುತ ದೃಶ್ಯವಿದು. ಮಹಿಳೆಯೊಬ್ಬರು ಕುಳಿತಿರುವ ಮತ್ತು ಹಿಂಬದಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬರುತ್ತಿರುವ ಕಂದನ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಅಮ್ಮನ ಹಿಂದಿನಿಂದ ಬರುವ ಪುಟಾಣಿ ತನ್ನ ಕೈಯಲ್ಲಿ ಡೈನೋಸಾರ್ ತಲೆಯನ್ನು ಹಿಡಿದುಕೊಂಡು ತಾಯಿಯನ್ನು ಹೆದರಿಸುವ ಪ್ರಯತ್ನ ಮಾಡುತ್ತಾನೆ. ಅಮ್ಮ ಕೂಡಾ ಕಂದನ ಖುಷಿಗಾಗಿ ಹೆದರಿದಂತೆ ನಟಿಸುವುದು ಕೂಡಾ ಇಲ್ಲಿ ಕಾಣುತ್ತದೆ. ಹೀಗೆ ಅಮ್ಮ ಹೆದರಿದ್ದನ್ನು ಕಂಡ ಈ ಪುಟಾಣಿಯ ಖುಷಿಗೆ ಪಾರವೇ ಇರಲಿಲ್ಲ. ಅದರಲ್ಲೂ ಕೊನೆಗೆ ಡೈನೋಸಾರ್ ತಲೆಯನ್ನು ತೆಗೆದು ತನ್ನ ಕೈಯನ್ನು ಅಮ್ಮನಿಗೆ ತೋರಿಸುವ ಕಂದನ ಆ ಮುಗ್ಧತೆಯೇ ಈ ಅಪೂರ್ವ ದೃಶ್ಯದ ಪ್ರಮುಖ ಹೈಲೈಟ್ಸ್. ನೋಡಿದಷ್ಟು ಹಿತ ನೀಡುವ ಅದ್ಭುತ ದೃಶ್ಯವಿದು.