ವಾಹನ ಅಪಘಾತದಲ್ಲಿ ಬಿಜೆಪಿ ಮುಖಂಡ ಸಾವನ್ನಪ್ಪಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮಡಿಕೇರಿ ಬಳಿ ಅಪಘಾತ ನಡೆದಿತ್ತು. ಬಾಲಚಂದ್ರ ಕಳಗಿ ದುರ್ಮರಣಕ್ಕೀಡಾದ ಘಟನೆಗೆ ಟ್ವಿಸ್ಟ್ ದೊರೆತಿದ್ದು, ಇದೊಂದು ಸಹಜ ಅಪಘಾತ ಪ್ರಕರಣವಾಗಿರದೆ ಕೊಲೆಗೆ ನಡೆಸಿದ ಕೃತ್ಯ ಎಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಕಳಗಿ ಸಾವಿನ ಬೆನ್ನಿಗೆ ಇಂತಹ ಅನುಮಾನಗಳು ವ್ಯಕ್ತವಾಗಿತ್ತು. ಮರಳು ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಬಾಲಚಂದ್ರ ಕಳಗಿಯವರು ತಡೆಯಾಗುತ್ತಿದ್ದಾರೆಂದು ಅವರನ್ನು ಕೊಲೆ ನಡೆಸಿದ ಸಂಶಯವಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ದೂರಿತ್ತು. ಅಪಘಾತ ನಡೆದ ಸ್ಥಳ ಕಳಗಿಯವರು ಓಡಾಡುವ ರಸ್ತೆ ಅಲ್ಲದ್ದರಿಂದ ಮನೆಯವರಿಗೂ ಈ ಘಟನೆಯ ಬಗ್ಗೆ ಸಂಶಯ ಮೂಡಿ ಕಳಗಿಯವರ ಚಿಕ್ಕಪ್ಪ ಕೂಡಾ ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಈ ದೂರಿನಲ್ಲಿ ಅವರು ಸಂಪಾಜೆಯ ದಂಪತಿಯ ಹೆಸರನ್ನು ಉಲ್ಲೇಖಿಸಿದ್ದರು. ಆದರೆ ಪೊಲೀಸ್ ತನಿಖೆಯ ವೇಳೆ ಘಟನೆಗೂ ಇವರಿಗೂ ಸಂಬಂಧವಿಲ್ಲವೆಂದು ಪೊಲೀಸರು ಕಂಡುಕೊಂಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಮರಳು ಮಾಫಿಯಾ ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದ್ದು, ಕೊಡಗು ಸಂಪಾಜೆ ಮತ್ತು ಕಲ್ಲುಗುಂಡಿಯ ವ್ಯಕ್ತಿಗಳಿಬ್ಬರು ಸೇರಿ ಲಾರಿ ಚಾಲಕನ ಮೂಲಕ ಈ ಕೃತ್ಯ ನಡೆಸಿರಬೇಕೆಂದು ಪೊಲೀಸರು ಅಂದಾಜಿಸಿದ್ದಾರೆ. ಶಂಕಿತ ಆರೋಪಿಗಳು ಈಗ ಪೊಲೀಸ್ ವಶದಲ್ಲಿದ್ದಾರೆಂದು ತಿಳಿದು ಬಂದಿದೆ.