ಉತ್ತರಪ್ರದೇಶದ ಶಾಲಾ ಬಸ್ಸಿನಲ್ಲಿ ಹೆಬ್ಬಾವು ಪತ್ತೆ
ಸುಮ್ಮನೆ ಕುಳಿತಿರುತ್ತೀರಿ. ಇದ್ದಕ್ಕಿದ್ದ ಹಾಗೆ ನಿಮ್ಮ ಬಳಿ ಹಲ್ಲಿಯೋ, ಜೇಡವೋ, ಜಿರಳೆಯೋ ಕಾಣಿಸಿಕೊಂಡರೆ ನಿಮಗೇನೆನ್ನಿಸುತ್ತದೆ? ಕಿರಿಕಿರಿ ಅಥವಾ ಭಯದಿಂದ ಮಾರುದ್ದ ದೂರ ಸರಿಯುತ್ತೀರಿ ತಾನೆ? ಅದೇ ಹಾವು ಕಾಣಿಸಿಕೊಂಡರೆ ಓಡಿಯೇ ಬಿಡುತ್ತೀರಿ. ದೊಡ್ಡ ಗಾತ್ರದ ಹೆಬ್ಬಾವು ಕಂಡರಂತೂ ಹೇಳುವುದೇ ಬೇಡ. ಇದೀಗ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಶಾಲಾ ಬಸ್ಸಿನಲ್ಲಿ ಹೆಬ್ಬಾವೊಂದು ನುಸುಳಿದ ವಿಡಿಯೋ ವೈರಲ್ ಆಗಿದೆ. ಭಾನುವಾರದಂದು ರಾಯಬರೇಲಿಯ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ ಬಸ್ಸಿನಲ್ಲಿ ನಡೆದ ಘಟನೆಯಾಗಿದೆ. ಬಸ್ಸಿನಲ್ಲಿ ಈ ಹೆಬ್ಬಾವು ಕಾಣಿಸಿಕೊಂಡಾಗ ಸಹಜವಾಗಿ ಆತಂಕವಾಗಿದೆ. ಅರಣ್ಯ ಇಲಾಖೆಯ ರಕ್ಷಣಾ ತಂಡಕ್ಕೆ ಸುದ್ದಿ ಮುಟ್ಟಿಸಿದ ನಂತರ ಸುಮಾರು ಒಂದು ತಾಸಿನ ತನಕ ಕಾರ್ಯಾಚರಣೆ ನಡೆಸಲಾಗಿದೆ. ಅರಣ್ಯ ಸಿಬ್ಬಂದಿ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸಿದೆ.