ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ರಾಜ್ಯದ ವಿವಿಧ ಜಿಲ್ಲೆಯ 9 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ದಾಖಲಾತಿ ದೊರೆತಿವೆ.
ಬೆಂಗಳೂರು, ಕೋಲಾರ, ಮಂಗಳೂರು, ಬೀದರ್, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಆಪ್ತರ ಮನೆ ಸೇರಿ 40 ಕಡೆ ಬೆಳ್ಳಂಬೆಳಗ್ಗೆ 250ಕ್ಕೂ ಅಧಿಕ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಕೆಲವು ಕಡೆ ಪರಿಶೀಲನಾ ಕಾರ್ಯ ಮುಂದುವರಿದಿದೆ.
ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ವಿಭಾಗದ ಕಾರ್ಯಪಾಲಕ ಅಭಿಯಂತರ ಜಿ.ಶ್ರೀಧರ್, ಉಡುಪಿಯ
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯ ಇಇ ಎಸ್ ಕೃಷ್ಣ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿಯ ಸಿಇ ಆರ್.ಪಿ ಕುಲಕರ್ಣಿ, ಮಾಲೂರು ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಎಚ್.ಆರ್. ಕೃಷ್ಣಪ್ಪ, ಬೀದರ್ ಪಿಆರ್ಇ ಜೆಇ ಸುರೇಶ್ ಮೋಹ್ರೆ ಸೇರಿ 9 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಸ್ವಂತ ಕಟ್ಟಡ, ಐಶಾರಾಮಿ ಕಾರು, ಲಕ್ಷಾಂತರ ರೂ. ನಗದು, ಚಿನ್ನಾಭರಣ ಪತ್ತೆಯಾಗಿವೆ. ಇಷ್ಟಲ್ಲದೇ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ಮಾಲೂರು ನಗರ ಯೋಜನಾ ನಿರ್ದೇಶಕ ಎಚ್.ಆರ್.ಕೃಷ್ಣಪ್ಪ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು, ದಾಖಲೆ ಹಾಗೂ ಆಸ್ತಿಪತ್ರಗಳ ಪರಿಶೀಲನೆ ನಡೆಯುತ್ತಿದೆ. ಇವರ ಸ್ವ ಗ್ರಾಮವಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ, ಮಾಲೂರು ಮನೆ ಮತ್ತು ಕಚೇರಿ ಐದು ಕಡೆ ಏಕಕಾಲಕ್ಕೆ ದಾಳಿ ನಡೆದಿದ್ದು, ಅಪಾರ ನಗದು, ಚಿನ್ನಾಭರಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.